ಡಬಲ್ ಸಂಭ್ರಮ: ಒಟ್ಟಿಗೆ ಕಾಣಿಸಿಕೊಂಡ ಯಶ್, ಪ್ರಭಾಸ್!

Neel
Published on

ಬೆಂಗಳೂರು: ‘ಕೆಜಿಎಫ್ 2’ ಭರ್ಜರಿ ಯಶಸ್ಸಿನ ಸಂಭ್ರಮದಲ್ಲಿರುವ ನಿರ್ದೇಶಕ ಪ್ರಶಾಂತ್ ನೀಲ್, ಆ ಸಡಗರದ ಜೊತೆಗೆ ತಮ್ಮ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದ್ದಾರೆ. ಗುರುವಾರ (ಜೂನ್ 2) ‘ಕೆಜಿಎಫ್ 2’ ಚಿತ್ರವು 50ನೇ ದಿನಕ್ಕೆ ಕಾಲಿಟ್ಟಿದೆ. ಅದರ ಬೆನ್ನಲ್ಲೇ ನಿನ್ನೆ ಶನಿವಾರ (ಜೂನ್ 4) ನೀಲ್, 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಎರಡೂ ಸಂಭ್ರಮಗಳನ್ನು ‘ಕೆಜಿಎಫ್’ ತಂಡದವರು ಒಟ್ಟಿಗೇ ಆಚರಿಸಿದ್ದಾರೆ.

ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಬರೋಬ್ಬರಿ ಆರು ಅಡಿ ಉದ್ದದ ವಿಶೇಷವಾದ ಕೇಕ್ ಮಾಡಿಸಲಾಗಿತ್ತು. ಮತ್ತೊಂದು ವಿಶೇಷ ಅಂದರೆ ನಟರಾದ ಯಶ್ ಮತ್ತು ಪ್ರಭಾಸ್, ನಿರ್ವಪಕ ವಿಜಯ್ ಕಿರಗಂದೂರು ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಚರಣೆಯಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ಹೊಂಬಾಳೆ ಫಿಲಂಸ್ ಬ್ಯಾನರ್​ನಲ್ಲಿ ವಿಜಯ್ ಕಿರಗಂದೂರ್ ಅವರೇ ‘ಸಲಾರ್’ ನಿರ್ವಿುಸುತ್ತಿದ್ದು, ಚಿತ್ರದ ಮುಹೂರ್ತದ ಸಮಯದಲ್ಲಿ ಪ್ರಭಾಸ್ ಮತ್ತು ಯಶ್ ಒಂದೆಡೆ ಸೇರಿದ್ದರು. ಅದಾಗಿ ಒಂದೂವರೆ ವರ್ಷದ ಬಳಿಕ ಈಗ ಪ್ರಶಾಂತ್ ನೀಲ್ ಹುಟ್ಟುಹಬ್ಬದಂದು ಮತ್ತೆ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಸದ್ಯ ಪ್ರಶಾಂತ್ ನೀಲ್, ಪ್ರಭಾಸ್ ನಾಯಕನಾಗಿರುವ ‘ಸಲಾರ್’ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಆ ಬಳಿಕ ಮೈತ್ರಿ ಮೂವಿ ಮೇಕರ್ಸ್ ನಿರ್ವಣದ ಜೂನಿಯರ್ ಎನ್​ಟಿಆರ್ ನಾಯಕನಾಗಿ ನಟಿಸಲಿರುವ ಚಿತ್ರ ಸೆಟ್ಟೇರಲಿದೆ. ಹೀಗಾಗಿ ಈ ವರ್ಷ ಮತ್ತು ಮುಂದಿನ ವರ್ಷ ಪ್ರಶಾಂತ್ ನೀಲ್ ಬಿಜಿಯಿರಲಿದ್ದು, ಆ ಬಳಿಕವಷ್ಟೇ ‘ಕೆಜಿಎಫ್ ಚಾಪ್ಟರ್ 3’ ಕೈಗೆತ್ತಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net