‘ಜೈ ಹನುಮಾನ್’ಗೆ ರಿಷಬ್ ಜೈಕಾರ: ‘ಹನುಮಾನ್’ ಸೀಕ್ವೆಲ್‌ಗೆ ನಾಯಕನಾದ ‘ಕಾಂತಾರ’ ಶಿವ

jai hanuman
Published on

ಬೆಂಗಳೂರು: ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಇದೇ ವರ್ಷದ ಜನವರಿಯಲ್ಲಿ ಮೂಡಿಬಂದಿದ್ದ ತೆಲುಗಿನ ಸೂಪರ್ ಹೀರೋ ಸಿನಿಮಾ ‘ಹನುಮಾನ್’. ತೇಜ ಸಜ್ಜಾ, ಅಮೃತಾ ಅಯ್ಯರ್, ವರಲಕ್ಷ್ಮೀ ಶರತ್‌ಕುಮಾರ್ ಪ್ರಮುಖ ತಾರಾಗಣದಲ್ಲಿದ್ದ ಈ ಚಿತ್ರವು ಪ್ಯಾನ್ ಇಂಡಿಯಾ ಬಿಡುಗಡೆಯಾಗಿ, ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ಪ್ರಶಾಂತ್ ವರ್ಮಾ ಸೀಕ್ವೆಲ್ ‘ಜೈ ಹನುಮಾನ್’ ೋಷಿಸಿದ್ದರು. ಆದರೆ, ಯಾರು ನಾಯಕ ಎಂಬುದನ್ನು ಈವರೆಗೆ ಅವರು ಬಿಟ್ಟುಕೊಟ್ಟಿರಲಿಲ್ಲ. ಈ ಮಧ್ಯೆ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ನಟ ರಿಷಬ್ ಶೆಟ್ಟಿ ನಾಯಕನಾಗುತ್ತಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡಿತ್ತಾದರೂ ಅದನ್ನು ಚಿತ್ರತಂಡ ಅಧಿಕೃತಪಡಿಸಿರಲಿಲ್ಲ. ಇದೀಗ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ‘ಜೈ ಹನುಮಾನ್’ಗೆ ನಿರೀಕ್ಷೆಯಂತೆಯೇ ನಟ ರಿಷಬ್ ಶೆಟ್ಟಿ ನಾಯಕನಾಗಿ ಆಯ್ಕೆಯಾಗಿದ್ದಾರೆ. ಹನುಮಂತನ ಅವತಾರದಲ್ಲಿ ರಿಷಬ್ ಶೆಟ್ಟಿ ಶ್ರೀರಾಮನ ವಿಗ್ರಹ ಹಿಡಿದಿರುವ ಆಕರ್ಷಕ ಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ‘ಜೈ ಹನುಮಾನ್’ ಚಿತ್ರವನ್ನು ನಿರ್ದೇಶಕ ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್‌ನ ಭಾಗವಾಗಿ ರೂಪಿಸಲಿದ್ದಾರೆ. ‘ಶ್ರೀಮಂತುಡು’, ‘ರಂಗಸ್ಥಲಂ’, ‘ಉಪ್ಪೇನಾ’ ಸೇರಿ ಹಲವು ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್‌ನಡಿಯಲ್ಲಿ ನವೀನ್ ಯೆರ್ನೇನಿ ಮತ್ತು ರವಿಶಂಕರ್ ಈ ಸೀಕ್ವೆಲ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಕೈಯಲ್ಲಿ ‘ಕಾಂತಾರ’ ಪ್ರೀಕ್ವೆಲ್: ‘ಜೈ ಹನುಮಾನ್’ ಚಿತ್ರಕ್ಕೆ ನಾಯಕ ನಟನಾಗಿ ಆಯ್ಕೆಯಾಗಿರುವ ರಿಷಬ್ ಶೆಟ್ಟಿ ಕೈಯಲ್ಲಿ ತಮ್ಮದೇ ಕನಸಿನ ಪ್ರಾಜೆಕ್ಟ್ ‘ಕಾಂತಾರ’ ಪ್ರೀಕ್ವೆಲ್ ಇದೆ. ‘ಕಾಂತಾರ’ ಚಿತ್ರದ ದೊಡ್ಡ ಮಟ್ಟದ ಯಶಸ್ಸಿನಿಂದ ರಿಷಬ್ ಶೆಟ್ಟಿ ‘ಕಾಂತಾರ-1’ ಪ್ರೀಕ್ವೆಲ್ ಆರಂಭಿಸಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಕೂಡ ಆರಂಭವಾಗಿದ್ದು, ತಮ್ಮ ಪಾತ್ರಕ್ಕಾಗಿ ರಿಷಬ್ ಕಳರಿಪಾಯುಟ್ಟು ಸಮರಕಲೆ ಆಭ್ಯಾಸ ಮಾಡಿದ್ದಾರೆ. ಬಹುನಿರೀಕ್ಷೆಯ ಈ ಚಿತ್ರದಲ್ಲಿ ಕದಂಬರ ಕಾಲದ ಕಥೆಯನ್ನು ಹೇಳಲು ಹೊರಟಿದ್ದಾರೆ. ಮೋಹನ್ ಲಾಲ್ ಸೇರಿ ಹಲವು ಬಹುಭಾಷಾ ತಾರೆಯರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ರಿಷಬ್ ಪ್ಲಸ್ ಪಾಯಿಂಟ್: ‘ಜೈ ಹನುಮಾನ್’ ಚಿತ್ರಕ್ಕೆ ರಿಷಬ್ ಶೆಟ್ಟಿ ಆಯ್ಕೆ ಚಿತ್ರತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ ಎನ್ನಲಾಗಿದೆ. ಏಕೆಂದರೆ, ನಟನೆಯಲ್ಲಿ ಅಷ್ಟೇ ಅಲ್ಲದೇ ರಿಷಬ್‌ಗೆ ನಿರ್ದೇಶನ, ಕಥೆ, ಚಿತ್ರಕಥೆ ರೂಪಿಸುವಲ್ಲಿ ತಮ್ಮದೇ ಆದ ಹಿಡಿತ ಇದೆ. ಇದು ‘ಜೈ ಹನುಮಾನ್’ ತಂಡಕ್ಕೆ ಅನುಕೂಲವಾಗಲಿದೆ. ಅಲ್ಲದೇ, ನಟನೆ, ನಿರ್ದೇಶನದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತರಾಗಿ ಇಡೀ ದೇಶಕ್ಕೆ ಪರಿಚಯವಾಗಿರುವುದರಿಂದ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ನೆರವಾಗಲಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net