ಕೈಸುಟ್ಟ ಲೈಗರ್; ಪುರಿ, ವಿಜಯ್ ಚಿತ್ರದಿಂದ ಹೊರನಡೆದ ನಿರ್ಮಾಪಕರು

Devarakonda
Published on

ವಿಜಯ್ ದೇವರಕೊಂಡ ನಟಿಸಿರುವ ‘ಲೈಗರ್’ ಚಿತ್ರ ಕಳೆದ ಆಗಸ್ಟ್ 25ರಂದು ಬಿಡುಗಡೆಯಾಗಿತ್ತು. ಚಿತ್ರ ಬಾಕ್ಸಾಫೀಸ್​ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಚಿತ್ರ ಗೆದ್ದೇ ಗೆಲ್ಲುತ್ತೆ ಎಂಬ ಅತಿಯಾದ ಭರವಸೆಯಲ್ಲಿದ್ದ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ತಂಡಕ್ಕೆ ‘ಲೈಗರ್’ ಸೋಲು ಶಾಕ್ ನೀಡಿದೆ. ಹೀಗಾಗಿ ನಾಯಕ ವಿಜಯ್ ದೇವರಕೊಂಡ ಸಂಭಾವನೆಯಲ್ಲಿ ಆರು ಕೋಟಿ ರೂಪಾಯಿ ಹಣವನ್ನು ನಿರ್ವಪಕರಿಗೆ ವಾಪಸ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಅದರ ಬೆನ್ನಲ್ಲೇ ವಿಜಯ್ ನಾಯಕನಾಗಿರುವ ಮತ್ತೊಂದು ಚಿತ್ರ ‘ಜನಗಣಮನ’ ನಿರ್ವಪಕರು ಇನ್ನೊಂದು ಶಾಕ್ ನೀಡಿದ್ದಾರೆ. ಮೂಲಗಳ ಪ್ರಕಾರ ಚಿತ್ರತಂಡದಿಂದ ಅವರು ಹೊರನಡೆದಿದ್ದಾರೆ ಎನ್ನಲಾಗಿದೆ.

‘ಲೈಗರ್’ ಬಳಿಕ ಪುರಿ ಜಗನ್ನಾಥ್, ವಿಜಯ್ ದೇವರಕೊಂಡ ಕಾಂಬಿನೇಷನ್​ನಲ್ಲಿ ಸೆಟ್ಟೇರಿದ್ದ ಮತ್ತೊಂದು ಚಿತ್ರ ‘ಜನಗಣಮನ’. ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಎರಡು ಹಂತದ ಚಿತ್ರೀಕರಣ ಸಹ ಪೂರ್ಣಗೊಂಡಿದೆ. ಇದೇ ಮಾರ್ಚ್​ನಲ್ಲಿ ಮೈ ಹೋಮ್ ಗ್ರೂಪ್ಸ್ ಸಂಸ್ಥೆ ಸಹ ನಿರ್ವಪಕರಾಗಿ ಚಿತ್ರತಂಡ ಸೇರಿಕೊಂಡಿತ್ತು. ಈಗ ‘ಲೈಗರ್’ ಮಕಾಡೆ ಮಲಗಿದ ಬಳಿಕ ನಾಯಕ ವಿಜಯ್ ದೇವರಕೊಂಡ, ಮತ್ತೊಂದು ಸಿನಿಮಾ ಮಾಡಿ ಆ ಬಳಿಕ ‘ಜನಗಣಮನ’ ಚಿತ್ರ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರಂತೆ. ‘ಲೈಗರ್’ ಸೋಲು, ನಾಯಕ ಹಿಂದೇಟು ಹಾಕಿರುವ ಕಾರಣಗಳಿಂದಾಗಿ ನಿರ್ವಪಕರು ಈಗ ‘ಜನಗಣಮನ’ ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಸದ್ಯ ಟಾಲಿವುಡ್ ಅಂಗಳದಲ್ಲಿ ಓಡಾಡುತ್ತಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net