

ಡಾ. ರಾಜಕುಮಾರ್ ಅವರ ಚಿತ್ರಜೀವನದಲ್ಲಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಕ್ಲಾಸಿಕ್ ಚಿತ್ರಗಳಲ್ಲಿ ಒಂದು ಎಂದರೆ ಅದು ‘ಬಬ್ರುವಾಹನ’. 1977ರ ಫೆಬ್ರವರಿ 16ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಈಗ 45 ವರ್ಷಗಳು. ಮಹಾಭಾರತದ ಕಥೆಯನ್ನು ಆಧರಿಸಿ, ಹುಣಸೂರು ಕೃಷ್ಣಮೂರ್ತಿ ಚಿತ್ರಕಥೆ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ರಾಜಕುಮಾರ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅರ್ಜುನ ಮತ್ತು ಅವನ ಮಗ ಬಬ್ರುವಾಹನನ ಪಾತ್ರಗಳಲ್ಲಿ ಮಿಂಚಿದ್ದರು. ಕೆ.ಸಿ.ಎನ್. ಗೌಡ ನಿರ್ವಣದ ಈ ಚಿತ್ರದಲ್ಲಿ ಬಿ. ಸರೋಜಾದೇವಿ, ಕಾಂಚನಾ, ರಾಮಕೃಷ್ಣ ಮುಂತಾದವರು ನಟಿಸಿದ್ದರು.
ಶ್ರೀಕೃಷ್ಣನ ಪಾತ್ರ ಮಾಡುವುದಕ್ಕೆ ಜನಪ್ರಿಯರಾಗಿದ್ದ ತೆಲುಗು ನಟ ಎನ್ಟಿಆರ್ ಅವರನ್ನು ಕರೆಸಬೇಕು ಎಂದು ಮೊದಲು ಚರ್ಚೆ ನಡೆದಿದ್ದರೂ, ಆ ನಂತರ ಈ ಪಾತ್ರಕ್ಕೆ ರಾಮಕೃಷ್ಣ ಅಂತಿಮವಾಗಿ ಆಯ್ಕೆಯಾದರು ಎಂದು ಹೇಳಲಾಗುತ್ತದೆ. ಈ ಚಿತ್ರವು ನಿರೂಪಣೆ ಮತ್ತು ಅಭಿನಯಕ್ಕಷ್ಟೇ ಅಲ್ಲ, ಹಾಡುಗಳಿಗೆ ಸಹ ಇಂದಿಗೂ ಜನಪ್ರಿಯ. ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ’, ‘ನಿನ್ನ ಕಣ್ಣ ನೋಟದಲ್ಲಿ’, ‘ಈ ಸಮಯ ಆನಂದಮಯ’, ‘ಆರಾಧಿಸುವೆ ಮದನಾರಿ’ ಮುಂತಾದ ಹಾಡುಗಳು ಈಗಲೂ ಜನಪ್ರಿಯ.
ಈ ಚಿತ್ರವು ಕನ್ನಡದಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದಷ್ಟೇ ಅಲ್ಲ, ತೆಲುಗಿಗೆ ‘ಅರ್ಜುನ ಗರ್ವಭಂಗಂ’ ಮತ್ತು ಹಿಂದಿಗೆ ‘ವೀರ್ ಅರ್ಜುನ್’ ಎಂಬ ಹೆಸರಿನಲ್ಲಿ ಡಬ್ ಆಗಿದ್ದು ವಿಶೇಷ. ಕೆಲವು ವರ್ಷಗಳ ಹಿಂದೆ, ‘ಬಬ್ರುವಾಹನ’ ಹೊಸ ತಂತ್ರಜ್ಞಾನದಲ್ಲಿ ಬಿಡುಗಡೆಯಾಗಿತ್ತು.