

ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ನಾಗರಹಾವು’ ಚಿತ್ರದ ರಾಮಾಚಾರಿ ಪಾತ್ರದ ಹ್ಯಾಂಗೋವರ್ನಲ್ಲೇ ಕೆಲವು ಸಿನಿಮಾಗಳು ಬಂದುಹೋಗಿವೆ. ಇದೀಗ ಅದೇ ಸ್ಟೈಲ್ನಲ್ಲಿ ಮತ್ತೊಬ್ಬ ರಾಮಾಚಾರಿ ಬರಲು ಸಜ್ಜಾಗುತ್ತಿದ್ದಾನೆ. ಮಾತ್ರವಲ್ಲ, ಆ ನಿಟ್ಟಿನಲ್ಲಿ ಲುಕ್ ಕೂಡ ಕೊಟ್ಟಿದ್ದಾನೆ.
‘ಮೇಘನಾ ಕ್ರಿಯೇಷನ್ಸ್’ ಹಾಗೂ ‘ಪನರೊಮಿಕ್ ಸ್ಟುಡಿಯೋಸ್’ ಬ್ಯಾನರ್ ಮೂಲಕ ಮೂಡಿಬರಲಿರುವ ‘ರಾಮಾಚಾರಿ 2.0’ ಚಿತ್ರದ ಫಸ್ಟ್ಲುಕ್ ಬುಧವಾರ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ತೇಜ್ ನಾಯಕರಾಗಿ ನಟಿಸಲಿರುವ ಜತೆಗೆ ನಿರ್ದೇಶಕರಾಗಿ ಆಕ್ಷನ್-ಕಟ್ ಕೂಡ ಹೇಳಲಿದ್ದಾರೆ. ಯಾರಿವರು ತೇಜ್?’ ಎಂಬ ಪ್ರಶ್ನೆಗೆ ನೆನಪಿನ ಪಟಲವನ್ನು ಒಮ್ಮೆ ಸ್ವಲ್ಪ ರಿವೈಂಡ್ ಮಾಡಿಕೊಳ್ಳ ಬೇಕು. ಕೆಲವು ದಿನಗಳ ಹಿಂದೆ ‘ರಿವೈಂಡ್’ ಎಂಬ ಸಿನಿಮಾ ನಿರ್ದೇಶನ ಮಾಡಿರುವ ತೇಜ್ ಅವರೇ ಈ ಚಿತ್ರಕ್ಕೂ ಆಕ್ಷನ್-ಕಟ್ ಹೇಳಲಿದ್ದಾರೆ.
‘ಸದ್ಯ ‘ರಿವೈಂಡ್’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅದರ ಜತೆಗೆ ನಾನು ‘ರಾಮಾಚಾರಿ 2.0’ ಸಿನಿಮಾ ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ಅಭಿನಯಿಸಲು ಸಜ್ಜಾಗುತ್ತಿದ್ದೇನೆ. ಇದು ಕನ್ನಡದಲ್ಲಿ ನನ್ನ ಅಭಿನಯದ 3ನೇ ಹಾಗೂ ನಿರ್ದೇಶನದ 2ನೇ ಸಿನಿಮಾ’ ಎನ್ನುತ್ತ ಚಿತ್ರದ ಫಸ್ಟ್ಲುಕ್ ಕುರಿತು ಮಾತನಾಡುತ್ತಾರೆ ತೇಜ್.
‘ನಿರ್ದೇಶಕ ಹಾಗೂ ಫೋಟೋಗ್ರಾಫರ್ ಕೆ. ಪ್ರವೀಣ್ ನಾಯಕ್ ‘ಓಂ’ ಸಿನಿಮಾ ಸಂಬಂಧ ಶಿವರಾಜ್ಕುಮಾರ್ಗೆ ವಿಶೇಷ ಲೈಟಿಂಗ್ನಲ್ಲಿ ವಿಭಿನ್ನ ಫೋಟೋಶೂಟ್ ಮಾಡಿದ್ದರು. ಅದೇ ಥರದ ಲೈಟಿಂಗ್ನಲ್ಲಿ ಈ ಚಿತ್ರಕ್ಕಾಗಿ ನನ್ನ ಫೋಟೋಶೂಟ್ ಮಾಡಿದ್ದಾರೆ’ ಎನ್ನುತ್ತಾರೆ ತೇಜ್.
‘ಇಲ್ಲಿ ಹೀರೋ ಹೆಸರು ರಾಮಾಚಾರಿ. ‘ನಾಗರಹಾವು’ ಚಿತ್ರದಲ್ಲಿನ ರಾಮಾಚಾರಿ ಥರವೇ ಇರುವ ಈತ ಭಾರಿ ಬುದ್ಧಿವಂತ ಕೂಡ ಆಗಿರುತ್ತಾನೆ. ಅಂಥವನು ಹೇಗೆ ಜೀವನ ಹಾಗೂ ಸಂಬಂಧವನ್ನು ನಿಭಾಯಿಸುತ್ತಾನೆ ಎಂಬುದೇ ಕಥಾಹಂದರ. ಇಲ್ಲಿನ ಹೀರೋ ಕ್ಲಾಸ್ ಮಾತ್ರವಲ್ಲ, ಮಾಸ್ ಕೂಡ ಆಗಿರುತ್ತಾನೆ. ಅದೇ ಕಾರಣಕ್ಕೆ ‘ರಾಮಾಚಾರಿ 2.0’ ಎಂಬ ಶೀರ್ಷಿಕೆ ಇಡಲಾಗಿದೆ’ ಎನ್ನುತ್ತಾರೆ ನಿರ್ದೇಶಕರು.
ಸದ್ಯ ‘ರಿವೈಂಡ್’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಮತ್ತು ಬಿಡುಗಡೆ ಬಗ್ಗೆ ಗಮನ ಹರಿಸುತ್ತಿರುವ ತೇಜ್, ಜೂನ್ ನಂತರ ‘ರಾಮಾಚಾರಿ 2.0’ ಶೂಟಿಂಗ್ ಆರಂಭಿಸುವ ಗುರಿ ಇರಿಸಿಕೊಂಡಿದ್ದಾರೆ.