ಅಕ್ಷಯ್ ಜತೆ ಮೃಣಾಲ್

mrunal jan 15
Published on

ಬಾಲಿವುಡ್ ನಟ ಹೃತಿಕ್ ರೋಷನ್ ಜತೆ ‘ಸೂಪರ್ 30’ ಹಾಗೂ ನಟ ಜಾನ್ ಅಬ್ರಹಾಂ ಅವರೊಂದಿಗೆ ‘ಬಾಟ್ಲಾ ಹೌಸ್’ ಚಿತ್ರ ಸೇರಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಮೃಣಾಲ್ ಠಾಕೂರ್, ಇದೀಗ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್​ಗೆ ಜತೆ ಆಗುತ್ತಿದ್ದಾರೆ.

ಅಕ್ಷಯ್ ನಟನೆಯ ‘ಬೆಲ್​ಬಾಟಂ’ ಚಿತ್ರದ ಪ್ರಮುಖ ಪಾತ್ರದಲ್ಲಿ ಮೃಣಾಲ್ ಅಭಿನಯಿಸಲಿದ್ದಾರೆ. ರಂಜಿತ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ನಟ ಅಕ್ಷಯ್ಕುಮಾರ್ ಅವರದು ಅಪರಾಧ ಪತ್ತೆ ಮಾಡುವ ಪೊಲೀಸ್ ಅಧಿಕಾರಿ ಪಾತ್ರವಾದರೆ, ಮೃಣಾಲ್ ಠಾಕೂರ್ ಅವರದು ನಾಯಕಿಯ ಪಾತ್ರ ಎಂದು ಹೇಳಲಾಗುತ್ತಿದೆ. ಈ ಹಿಂದಿನ ಚಿತ್ರಗಳಲ್ಲಿ ಅಭಿನಯದ ಮೂಲಕ ಮೃಣಾಲ್ ಠಾಕೂರ್ ‘ಪ್ರತಿಭಾನ್ವಿತ ನಟಿ’ ಎಂದು ಕರೆಸಿಕೊಂಡಿದ್ದರು. ಇದೀಗ ಈ ಸಿನಿಮಾದಲ್ಲಿ ಅಕ್ಷಯ್ ಜತೆಗೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಥ್ರಿಲ್ಲರ್, ರೊಮ್ಯಾಂಟಿಕ್, ಆಕ್ಷನ್, ಎಮೋಷನ್ ಕಥಾಹಂದರದ ಈ ಚಿತ್ರ, 1980ರ ರೆಟ್ರೋ ಶೈಲಿಯದ್ದಾಗಿದೆ. ಹಿಂದಿಯ ಈ ‘ಬೆಲ್ ಬಾಟಂ’ ಚಿತ್ರವು ಜಯತೀರ್ಥ ನಿರ್ದೇಶನದ, ರಿಷಬ್ ಶೆಟ್ಟಿ ನಾಯಕ ನಟನೆಯ ಕನ್ನಡದ ‘ಬೆಲ್ ಬಾಟಂ’ ಚಿತ್ರದ ರಿಮೇಕ್ ಎನ್ನಲಾಗಿತ್ತು. ಅಲ್ಲದೆ, ಚಿತ್ರದ ಪೋಸ್ಟರ್ ಕೂಡ ಈ ಅನುಮಾನಕ್ಕೆ ಪೂರಕವಾಗಿತ್ತು. ಆದರೆ ಹಿಂದಿಯ ‘ಬೆಲ್​ಬಾಟಂ’ ರಿಮೇಕ್ ಅಲ್ಲ ಎನ್ನುವ ಮೂಲಕ ನಟ ಅಕ್ಷಯ್ ಕುಮಾರ್ ಈ ಅನುಮಾನಕ್ಕೆ ತೆರೆ ಎಳೆದಿದ್ದರು. ಈ ಚಿತ್ರಕ್ಕೆ ನಿಖಿಲ್ ಅಡ್ವಾಣಿ, ವಾಸು ಭಾಗನಾನಿ, ಜಾಕಿ ಭಾಗನಾನಿ ಜತೆ ಅಕ್ಷಯ್ಕುಮಾರ್ ಕೂಡ ಬಂಡವಾಳ ಹೂಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net