ದರ್ಶನ್ ಮನವಿಗೆ ಅಭೂತ ಪೂರ್ವ ಸ್ಪಂದನೆ: ಕೋಟಿ ಸನಿಹ ಬಂದ ಪ್ರಾಣಿ ದತ್ತು ಮೊತ್ತ

collage (3)
Published on

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಸಿನಿಮಾ ಕ್ಷೇತ್ರದ ಜನರಿಗಾಗಿ ಹಲವಾರು ಸ್ಟಾರ್​ ನಟರು ಮುಂದೆ ಬಂದು ಸಹಾಯ ಮಾಡಿದ್ದಾರೆ, ಮಾಡುತ್ತಿದ್ದಾರೆ. ಅದೇ ರೀತಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಕೂಡ ಅಂಥದ್ದೊಂದು ಉದ್ದೇಶಕ್ಕಾಗಿ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಮೃಗಾಲಯಗಳಲ್ಲಿನ ಪ್ರಾಣಿಗಳಿ ರಕ್ಷಣೆಗೆ ಮನವಿ ಮಾಡಿ, ದತ್ತು ಪಡೆಯುವಂತೆ ಕೋರಿದ್ದರು. ಅದರಂತೆ ಕೇವಲ ಅವರ ಮನವಿಯ ಹಿನ್ನೆಲೆಯಲ್ಲಿ ದೊಡ್ಡ ಬದಲಾವಣೆಯೇ ನಡೆದುಹೋಗಿದೆ. ನಾಲ್ಕೇ ದಿನದಲ್ಲಿ ಕೋಟಿ ಸನಿಹಕ್ಕೆ ಬಂದು ನಿಂತಿದೆ.

ಹೌದು.. ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ಪ್ರಾಣಿಪ್ರಿಯ ದರ್ಶನ್​ ಮೃಗಾಲಯದ ಪ್ರಾಣಿಗಳ ಪರವಾಗಿ ದನಿ ಎತ್ತಿದ್ದರು. ಕರೊನಾದ ಕಾರಣದಿಂದಾಗಿ ಮೃಗಾಲಯಕ್ಕೂ ಸಂಕಷ್ಟ ಎದುರಾಗಿದ್ದು, ಪ್ರಾಣಿಗಳ ಬದುಕಿಗೂ ಕಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಪ್ರಾಣಿಗಳ ಕುರಿತ ಪ್ರೀತಿಯನ್ನು ವ್ಯಕ್ತಪಡಿಸಿ ನೆರವಾಗಬೇಕೆಂದು ವಿಡಿಯೋ ಮೂಲಕ ಕೋರಿಕೊಂಡಿದ್ದರು. ಹಾಗೇ ಕೋರಿದ ಬೆನ್ನಲ್ಲೇ ರಾಜ್ಯದ ಹಲವು ಮೃಗಾಲಯಗಳಲ್ಲಿನ ಪ್ರಾಣಿಗಳನ್ನು ನೂರಾರು ಮಂದಿ ದತ್ತು ಪಡೆದಿದ್ದಾರೆ. ಕೇವಲ ನಾಲ್ಕೇ ದಿನಗಳಲ್ಲಿ 70 ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹವಾಗಿದೆ.

ಕರೊನಾದಿಂದಾಗಿ ಕರ್ನಾಟಕದ 9 ಮೃಗಾಲಯಗಳಿಗೂ ಸಮಸ್ಯೆ ಆಗಿರುವ ಬಗ್ಗೆ ನಟ ದರ್ಶನ ಕಳವಳ ವ್ಯಕ್ತಪಡಿಸಿದ್ದರು. ಪ್ರವಾಸಿಗರು ಬರದೇ ಇರುವುದರಿಂದ ಈ ಮೃಗಾಲಯಗಳಲ್ಲಿರುವ ಒಟ್ಟು 5 ಸಾವಿರ ಪ್ರಾಣಿಗಳಿಗೆ ಕಷ್ಟ ಎದುರಾಗಿದೆ. ಹಾಗಂತ ಎಲ್ಲರೂ ಮನೆಯಲ್ಲಿ ಪ್ರಾಣಿ ಸಾಕಲು ಆಗುವುದಿಲ್ಲ. ಆದರೆ ಈ ಪ್ರಾಣಿಗಳನ್ನು ದತ್ತು ಪಡೆಯಬಹುದು. ಅದಕ್ಕಾಗಿ ವರ್ಷಕ್ಕೊಮ್ಮೆ ಮಾತ್ರ ಹಣ ಕೊಟ್ಟರೆ ಸಾಕು. ಅಲ್ಲದೆ ಆ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ಕೂಡ ಸಿಗಲಿದೆ. ಸಾಧ್ಯವಿರುವ ಎಲ್ಲರೂ ಪ್ರಾಣಿಗಳನ್ನು ದತ್ತು ಪಡೆಯಬೇಕು ಎಂದು ಅವರು ಮೃಗಾಲಯದಲ್ಲಿ ಪ್ರಾಣಿಗಳ ಮುಂದೆ ನಿಂತುಕೊಂಡು ವಿಡಿಯೋ ಮಾಡಿದ್ದರು.

ಅದರಂತೆ ಒಟ್ಟಾರೆಯಾಗಿ ರಾಜ್ಯದ ಹಲವು ಮೃಗಾಲಯಗಳಿಂದ ಶನಿವಾರ 8ಲಕ್ಷ, ಭಾನುವಾರ 22 ಲಕ್ಷ, ಸೋಮವಾರ 19 ಲಕ್ಷ, ಮಂಗಳವಾರ 18 ಲಕ್ಷ ಹಣ ಜಮೆಯಾಗಿದ್ದು, ದರ್ಶನ್ ಅವರ ಒಂದೇ ಒಂದು ಮಾತಿಗೆ ದೊಡ್ಡ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net