ಪುನೀತ್​ ಜತೆ ಡ್ಯಾನ್ಸ್ ಮಾಡಲು ಕೊಂಚಬೇಕು ಎಂದ್ರು ಕಾವ್ಯಾ

kavya Puneet
Published on

 ಬೆಂಗಳೂರು: ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ಪುನೀತ್ ರಾಜಕುಮಾರ್ ನಾಯಕತ್ವದ ‘ಯುವರತ್ನ’ ಸಹ ಒಂದು. ಟೀಸರ್ ಮತ್ತು ಸ್ಟಾರ್ ತಾರಾಗಣದ ಮೂಲಕವೇ ಸಖತ್ ಹೈಪ್ ಗಿಟ್ಟಿಸಿಕೊಂಡ ಈ ಚಿತ್ರದ ಬಳಗಕ್ಕೆ ಮತ್ತೋರ್ವ ನಟಿ ಎಂಟ್ರಿ ಪಡೆದುಕೊಂಡಿದ್ದಾರೆ. ನಾಯಕನ ಪರಿಚಯಿಸುವ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಕಾವ್ಯಾ ಶೆಟ್ಟಿ, ಮೊದಲ ಬಾರಿಗೆ ಪುನೀತ್ ಎದುರು ಕಾಣಿಸಿಕೊಳ್ಳುವ ಖುಷಿಯಲ್ಲಿದ್ದಾರೆ. ಬಹುತೇಕ ಮಾತಿನ ಭಾಗದ ಶೂಟಿಂಗ್ ಮುಗಿಸಿಕೊಂಡಿರುವ ‘ಯುವರತ್ನ’ ಚಿತ್ರ ಸದ್ಯ ಹಾಡಿನ ಶೂಟಿಂಗ್ ವಿಚಾರವಾಗಿ ಸದ್ದು ಮಾಡುತ್ತಿದೆ. ಪುನೀತ್ ಅವರನ್ನು ಪರಿಚಯಿಸುವ ಹಾಡು ಇದಾಗಿದ್ದು, ಈ ಹಾಡಿಗಾಗಿಯೇ ಹಲವು ಕಲರ್​ಫುಲ್ ಸೆಟ್​ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಗೋವಾದಲ್ಲಿಯೂ ಹಾಡಿನ ಶೂಟಿಂಗ್ ನಡೆಯಲಿದೆ.

ಇದೇ ತಿಂಗಳ ಕೊನೆಯಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ. ಈ ಖುಷಿ ವಿಚಾರದ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡುವ ಕಾವ್ಯಾ, ‘ಪುನೀತ್ ಅವರೆದುರಿಗೆ ಡಾನ್ಸ್ ಮಾಡುವುದಕ್ಕೆ ಕೊಂಚ ಧೈರ್ಯ ಬೇಕು. ಅವರೆಂಥ ಡಾನ್ಸರ್ ಎಂಬುದು ಎಲ್ಲರಿಗೂ ಗೊತ್ತು. ಹಾಗಾಗಿ ಮುಂದಿನ ವಾರದಿಂದ ಡಾನ್ಸ್ ಪ್ರಾಕ್ಟಿಸ್​ನಲ್ಲಿ ಪಾಲ್ಗೊಳ್ಳಲಿದ್ದೇನೆ. ಗ್ಲಾಮರಸ್ ಆಗಿ ಹೊಸ ರೀತಿಯಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ. ಅಷ್ಟೇ ನರ್ವಸ್ ಸಹ ಆಗಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ. ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಥಮನ್ ಅವರ ಗೀತೆಗೆ, ತೆಲುಗಿನ ‘ಬುಟ್ಟ ಬೊಮ್ಮ ...’ ಖ್ಯಾತಿಯ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್, ಈ ಹಾಡಿಗೆ ಕೋರಿಯೋಗ್ರಾಫ್ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net