ಯುವರತ್ನ ಸಂಗೀತಗಾರನ ಕನ್ನಡ ಪ್ರೀತಿ; ಆಡಿಯೋ ಬಗ್ಗೆ ಕನ್ನಡದಲ್ಲಿ ಟ್ವೀಟ್​

State- Yuvaratna
Published on

ಬೆಂಗಳೂರು: ‘ಪವರ್​ಸ್ಟಾರ್’ ಪುನೀತ್ ರಾಜ್​ಕುಮಾರ್ ನಾಯಕತ್ವದ ‘ಯುವರತ್ನ’ ಚಿತ್ರತಂಡದಿಂದ ಏನಾದರೂ ಹೊಸ ಮಾಹಿತಿ ಹೊರಬೀಳಲಿದೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ನಿರ್ದೇಶಕರು ಚಿತ್ರದ ಆಡಿಯೋ ಬಗ್ಗೆ ಏನಾದರೂ ಸಣ್ಣ ಅಚ್ಚರಿ ನೀಡಲಿದ್ದಾರೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಇದೀಗ ಒಂದಷ್ಟು ಕಾರಣಗಳಿಂದ ಅದೆಲ್ಲವೂ ಮುಂದೆ ಹೋಗಿದೆ. ಫ್ಯಾನ್ಸ್​ಗೆ ಆಡಿಯೋ ಬಗ್ಗೆ ಹೆಚ್ಚಿನ ಮಾಹಿತಿ ಸಿಗದ ವಿಚಾರ ಬೇಸರ ತರಿಸಿದರೆ, ಸಂಗೀತ ನಿರ್ದೇಶಕರ ಕನ್ನಡಾಭಿಮಾನ ಖುಷಿಕೊಟ್ಟಿದೆ. ಕನ್ನಡದಲ್ಲಿಯೇ ಟ್ವಿಟ್ ಮಾಡಿರುವ ತಮನ್, ಅಪ್ಪು ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. ಹೌದು, ಚಿತ್ರದ ನಿರ್ದೇಶಕ ಸಂತೋಷ್ ಆನಂದ್​ರಾಮ್ ಶೀಘ್ರದಲ್ಲಿ ಚಿತ್ರದ ಹಾಡಿನ ಬಗ್ಗೆ ಹೊಸ ವಿಚಾರವನ್ನು ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದರು.

ಲಾಕ್​ಡೌನ್ ಹಿನ್ನೆಲೆಯಲ್ಲಿ ಅದ್ಯಾವುದೂ ಈಡೇರಲಿಲ್ಲ. ಆ ಬಗ್ಗೆ ಮಾತನಾಡಿದ ಅವರು, ‘ಚೆನ್ನೈ, ಹೈದರಾಬಾದ್ ಹಾಗೂ ಮುಂಬೈನಲ್ಲಿ ಸಿನಿಮಾ ಸಂಬಂಧಿ ಕೆಲಸಗಳು ನಡೆಯುತ್ತಿಲ್ಲ. ಚೆನ್ನೈ, ಮುಂಬೈ ಲಾಕ್​ಡೌನ್​ನಲ್ಲಿವೆ. ಪರಿಸ್ಥಿತಿ ಹದವಾಗುವವರೆಗೂ ‘ಯುವರತ್ನ’ ಹಾಡುಗಳು ಬರುವುದು ಕಷ್ಟ. ಸಂಗೀತ ನಿರ್ದೇಶಕ ತಮನ್ ಅವರು ಚೆನ್ನೈನಲ್ಲಿ ಲಾಕ್​ಡೌನ್​ನಲ್ಲಿದ್ದಾರೆ’ ಎಂದು ಅಸಲಿ ವಿಚಾರವನ್ನು ಹೊರ ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಕನ್ನಡದಲ್ಲಿಯೇ ಟ್ವೀಟ್ ಮಾಡಿದ ತಮನ್, ‘ಎಲ್ಲರಿಗೂ ನಮಸ್ಕಾರ, ನಾನು ಚೆನ್ನೈನಲ್ಲಿ ಲಾಕ್​ಡೌನ್​ನಲ್ಲಿ ಇರುವುದರಿಂದ ಕೆಲಸಗಳು ನಡೆಯುತ್ತಿಲ್ಲ. ಹಾಡುಗಾರರು ಮತ್ತು ಸಂಗೀತಗಾರರು ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲಿರುವ ಕಾರಣ ‘ಯುವರತ್ನ’ ಚಿತ್ರದ ಹಾಡುಗಳು ತಡವಾಗಲಿವೆ! ನಿಮಗೆ ಪವರ್​ಫುಲ್ ಆಲ್ಬಮ್ ಕೊಡುವ ಜವಾಬ್ದಾರಿ ನಮ್ಮದು. ದಯವಿಟ್ಟು ಅಭಿಮಾನಿಗಳು ಸಹಕರಿಸಿ’ ಎಂದು ಮನವಿ ಮಾಡಿದ್ದಾರೆ. ತಮಿಳು ಸಂಗೀತ ನಿರ್ದೇಶಕನ ಕನ್ನಡ ಪ್ರೀತಿಗೆ ಅಭಿಮಾನಿಗಳು ಖುಷಿಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net