ಯುವರತ್ನನ ಯುವಸಂಭ್ರಮ: ಕಲಬುರಗಿ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಪುನೀತ್..

Yuvarathna
Published on

ಬೆಂಗಳೂರು: ‘ಯುವರತ್ನ’ ಚಿತ್ರದ ಮೂರು ದಿನಗಳ ಯುವಸಂಭ್ರಮಕ್ಕೆ ಭಾನುವಾರದಿಂದಲೇ ಚಾಲನೆ ಸಿಕ್ಕಿದೆ. ಕಲಬುರಗಿಯಿಂದ ಆರಂಭವಾದ ಪ್ರಯಾಣ ಕುಂದಾನಗರಿ ಬೆಳಗಾವಿ ಬಂದು, ಅದಾದ ಬಳಿಕ ಹುಬ್ಬಳ್ಳಿಯಲ್ಲಿಯೂ ಪುನೀತ್ ರಾಜಕುಮಾರ್ ಅವರನ್ನು ಕಂಡು ಸಾವಿರಾರು ಅಭಿಮಾನಿಗಳು ‘ಪುನೀತ’ರಾದರು. ಈ ಮೊದಲೇ ಹೇಳಿಕೊಂಡಂತೆ 21ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ‘ಯುವಸಂಭ್ರಮ’ ಕಾರ್ಯಕ್ರಮವನ್ನು ಆಯೋಜನೆ ಮಾಡುವುದಾಗಿ ತಂಡ ಹೇಳಿಕೊಂಡಿತ್ತು. ಆದರೆ, ಕಾರಣಾಂತರಗಳಿಂದ ಅದನ್ನು ಕೈಬಿಟ್ಟು, ‘ನಿಮ್ಮ ಊರಿಗೆ ನಿಮ್ಮ ಅಪ್ಪು’ ಅನ್ನೋ ಪರಿಕಲ್ಪನೆಯಲ್ಲಿ ಹೊಸ ಪ್ಲಾನ್ ರೂಪಿಸಲಾಗಿತ್ತು. ಅದರಂತೆ ಮೊದಲಿಗೆ ಕಲಬುರಗಿಯ ಏಷಿಯನ್ ಮಾಲ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ಅಭಿಮಾನಿಗಳು ಆಗಮಿಸಿದ್ದರಿಂದ ಪೊಲೀಸರು ಲಾಠಿ ಬೀಸಿದರು. ಬಳಿಕ ಅಲ್ಲಿನ ಸಂಸ್ಥಾನದ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪನವರ ಆಶೀರ್ವಾದ ಪಡೆದು ಬೆಳಗಾವಿಯತ್ತ ಪುನೀತ್ ಮತ್ತು ತಂಡ ಮುಖ ಮಾಡಿತು. ಅಲ್ಲಿನ ಅಭಿಮಾನಿಗಳಿಗೆ ದರ್ಶನ ಕೊಟ್ಟು, ಮಳೆಯ ನಡುವೆಯೂ ಐನಾಕ್ಸ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜತೆ ಪುನೀತ್ ಒಂದಷ್ಟು ಹೊತ್ತು ಬೆರೆತರು. ಹೋದಲ್ಲೆಲ್ಲ ಹೂವಿನ ಮಳೆ ಸುರಿಸುವ ಮೂಲಕ ಅಭಿಮಾನಿಗಳು ಅಭಿಮಾನ ಮೆರೆದರು. ಈ ಯುವ ಸಂಭ್ರಮದಲ್ಲಿ ಪುನೀತ್ ಜತೆ ಧನಂಜಯ್, ನಿರ್ದೇಶಕ ಸಂತೋಷ್ ಆನಂದ್​ರಾಮ್ ನಟ ರವಿಶಂಕರ್ ಗೌಡ ಜತೆಯಾಗಿದ್ದರು.

ಹುಬ್ಬಳ್ಳಿಯಲ್ಲಿ ಜನಸಾಗರ: ಯುವರತ್ನನ ಯುವಸಂಭ್ರಮಕ್ಕೆ ಹುಬ್ಬಳ್ಳಿಯಲ್ಲಿ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಅರ್ಬನ್ ಓಯಾಸಿಸ್ ಮಾಲ್ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಯುವ ಸಂಭ್ರಮದಲ್ಲಿ ಪಾಲ್ಗೊಂಡರು. ಕಿಕ್ಕಿರಿದು ಸೇರಿದ್ದ ಅಭಿಮಾನಿಗಳನ್ನು ಕಂಡ ಪುನೀತ್ ಹುಬ್ಬಳ್ಳಿಯ ಜತೆಗಿನ ತಮ್ಮ ಕುಟುಂಬದ ನಂಟನ್ನು ಬಿಚ್ಚಿಟ್ಟರು. ಈ ಭಾಗದ ಜನರ ಅಭಿಮಾನವನ್ನೂ ಮಗದೊಮ್ಮೆ ಕೊಂಡಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net