

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಚಿತ್ರವು ಭಾರತದಲ್ಲಿ ಏಪ್ರಿಲ್ ಒಂದರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ವಿಶೇಷವೆಂದರೆ, ಒಂದು ದಿನ ಮೊದಲೇ, ಅಂದರೆ ಮಾರ್ಚ್ 31ರಂದೇ ಚಿತ್ರವು ಅಮೆರಿಕಾದಲ್ಲಿ ಪ್ರೀಮಿಯರ್ ಆಗಲಿದೆ.
‘ಯುವರತ್ನ’ ಚಿತ್ರವು ದೇಶವಲ್ಲದೆ, ವಿದೇಶಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ ಎಂಬ ಸುದ್ದಿ ಮೊದಲೇ ಇತ್ತು. ಅದರಂತೆ ಅಮೆರಿಕಾದ ಚಿತ್ರಮಂದಿರಗಳ ಪಟ್ಟಿಯನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದೆ. ಅದರಂತೆ, ಚಿತ್ರವು ಮಾರ್ಚ್ 31ರ ಸಂಜೆಯೇ ಅಮೆರಿಕಾದ ಹಲವು ನಗರಗಳಲ್ಲಿ ಪ್ರೀಮಿಯರ್ ಆಗಲಿದೆ. ಲಾಸ್ ಏಂಜಲೀಸ್, ಅಟ್ಲಾಂಟ, ಚಿಕಾಗೋ, ಡೆಟ್ರಾಯ್ಟ, ಡಲ್ಲಾಸ್ ಮುಂತಾದ ನಗರಗಳಲ್ಲಿನ ಚಿತ್ರಮಂದಿರಗಳಲ್ಲಿ ಬುಧವಾರ ಬಿಡುಗಡೆಯಾಗುತ್ತಿದ್ದು, ಇನ್ನೂ ಕೆಲವು ನಗರಗಳಲ್ಲಿ ಗುರುವಾರ ಬಿಡುಗಡೆಯಾಗುತ್ತಿದೆ. ವೀಕೆಂಡ್ ಸಿನಿಮಾಸ್ ಸಂಸ್ಥೆಯು, ಚಿತ್ರವನ್ನು ಅಮೆರಿಕಾದಲ್ಲಿ ಬಿಡುಗಡೆ ಮಾಡುತ್ತಿದೆ.
ಮಾರ್ಚ್ 31ರಂದು ಅಮೆರಿಕಾದ ಕೆಲವು ಕಡೆ ಚಿತ್ರ ಬಿಡುಗಡೆಯಾದರೆ, ಏಪ್ರಿಲ್ 02ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ಗಳಲ್ಲಿ ‘ಯುವರತ್ನ’ ಬಿಡುಗಡೆಯಾಗುತ್ತಿದೆ. ಸದರನ್ ಸ್ಟಾರ್ ಇಂಟರ್ನ್ಯಾಷನಲ್ ಸಂಸ್ಥೆಯು ಈ ಚಿತ್ರವನ್ನು ಇಲ್ಲಿ ಬಿಡುಗಡೆ ಮಾಡುತ್ತಿದ್ದು, ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭವಾಗಿದೆ.
ಕರ್ನಾಟಕದಲ್ಲೂ ಭಾನುವಾರದಿಂದಲೇ ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭವಾಗಿದ್ದು, ಪುನೀತ್ ಅಭಿಮಾನಿಗಳು ಚಿತ್ರವನ್ನು ಮೊದಲ ದಿನ ಮೊದಲ ಆಟದಲ್ಲೇ ಕಣ್ತುಂಬಿಕೊಳ್ಳುವ ಸಲುವಾಗಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಟಿಕೆಟ್ ಬುಕ್ ಮಾಡಿದ್ದಾರೆ.
ಯುವರತ್ನನಿಗಿಲ್ಲ ಸಮಸ್ಯೆ: ಇನ್ನು ಕರೊನಾ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಏನಾದರೂ ಲಾಕ್ಡೌನ್ ಅಥವಾ ಶೇ.50ರಷ್ಟು ಹಾಜರಾತಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆಯಾ ಎಂಬ ಪ್ರಶ್ನೆ ಎಲ್ಲರಲ್ಲಿತ್ತು. ಆದರೆ, ಮುಂದಿನ ಎರಡು ವಾರಗಳ ಕಾಲ ಕಾದು ನೋಡುವ ತಂತ್ರ ಅನುಸರಿಸಿರುವ ಸರ್ಕಾರ, ಕಟ್ಟುನಿಟ್ಟಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದೆ. ಇದರಿಂದಾಗಿ, ‘ಯುವರತ್ನ’ ಚಿತ್ರದ ಬಿಡುಗಡೆಗಿದ್ದ ಅಡ್ಡಿ ನಿವಾರಣೆಯಾಗಿದ್ದು, ಚಿತ್ರ ಸುಸೂತ್ರವಾಗಿ ಬಿಡುಗಡೆಯಾಗಲಿದೆ.