

ಬೆಂಗಳೂರು: ಸ್ಯಾಂಡಲ್ವುಡ್ ಬಹುನಿರೀಕ್ಷಿತ "ಯುವರತ್ನ" ಚಿತ್ರದಲ್ಲಿನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಹೊಸ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪುನೀತ್ ಅಭಿಮಾನಿಗಳಿಗೆ ಹೊಸ ವರ್ಷದ ಉಡುಗೊರೆ ನೀಡಿದೆ.
ಟ್ವಿಟರ್ ಮೂಲಕ ಹೊಸ ಲುಕ್ ಬಿಡುಗಡೆ ಮಾಡಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಮ್ಮ ಪುನೀತ್ ರಾಜ್ಕುಮಾರ್ ಅವರ ಹೊಸ ಲುಕ್ ಎಲ್ಲರಲ್ಲೂ ಕ್ರೇಜ್ ಹುಟ್ಟುಹಾಕಲಿದೆ. ಎಲ್ಲ ಅಭಿಮಾನಿಗಳಿಗೂ ಹಾಗೂ ಯುವರತ್ನ ಚಿತ್ರತಂಡದ ಸ್ನೇಹಿತರಿಗೂ ಹೊಸ ವರ್ಷದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಬಿಡುಗಡೆಯಾಗಿರುವ ಪುನೀತ್ ಅವರ ಹೊಸ ಲುಕ್ ಚಿತ್ರದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅಸ್ಥಿ ಪಂಜರವನ್ನು ಹೊತ್ತ ವಿಕ್ರಮಾದಿತ್ಯನಂತೆ ಪುನೀತ್ ಪೋಸ್ ನೀಡಿದ್ದಾರೆ. ಅಲ್ಲದೆ, ಅವರ ಪಕ್ಕದಲ್ಲಿ ಡೈನೋಸಾರ್ ಅಸ್ಥಿಪಂಜರ ಇರುವುದು ಚಿತ್ರದ ಮೇಲೆ ಕುತೂಹಲ ಕೆರಳಿಸಿದೆ. ಈಗಾಗಲೇ ಪೋಸ್ಟರ್ ನೋಡಿದವರು ಸಾಕಷ್ಟು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಅಂದಹಾಗೆ ಚಿತ್ರವನ್ನು ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ ಹಾಗೂ ರಾಜಕುಮಾರ್ ಖ್ಯಾತಿಯ ಸಂತೋಷ್ ಆನಂದ್ರಾಮ್ ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬರುತ್ತಿದೆ. ಎಸ್ ತಮನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಹಿಂದೆ ಟೀಸರ್ನಿಂದಲೇ ಯುವರತ್ನ ಸದ್ದು ಮಾಡಿತ್ತು.