ಮಂಡ್ಯ ಮೈಸೂರಲ್ಲಿ ಪುನೀತ್ ಅಬ್ಬರ; ರಾಜ್ಯ ಸುತ್ತಾಟಕ್ಕೆ ಯುವರತ್ನ ತೆರೆ...

Punith
Published on

ಬೆಂಗಳೂರು: ‘ಯುವರತ್ನ’ ಚಿತ್ರದ ಪ್ರಚಾರದ ಸಲುವಾಗಿ ರಾಜ್ಯ ಪ್ರವಾಸ ಆರಂಭಿಸಿದ್ದ, ‘ಪವರ್​ಸ್ಟಾರ್’ ಪುನೀತ್ ರಾಜಕುಮಾರ್ ಇದೀಗ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಮೂರನೇ ದಿನವಾದ ಮಂಗಳವಾರ ಮೈಸೂರು ಮತ್ತು ಮಂಡ್ಯ ಅಭಿಮಾನಿಗಳನ್ನು ಭೇಟಿಯಾಗಿ ‘ನಿಮ್ಮ ಅಪು್ಪ ನಿಮ್ಮ ಊರಿಗೆ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. 21ರಂದೇ ಮೈಸೂರಿನಲ್ಲಿ ಯುವಸಂಭ್ರಮ ಆಯೋಜಿಸಲಾಗಿತ್ತಾದರೂ, ಕಾರಣಾಂತರಗಳಿಂದ ಅದನ್ನು ರದ್ದು ಮಾಡಿ, ರಾಜ್ಯದ ಹಲವು ಜಿಲ್ಲೆಗಳಿಗೆ ತಂಡ ಭೇಟಿ ನೀಡಿತ್ತು. ಹೋದಲ್ಲೆಲ್ಲ ಅಭೂತಪೂರ್ವ ಸ್ವಾಗತ ಸಿಕ್ಕಿದ್ದು, ಮಂಡ್ಯ ಮೈಸೂರಿನಲ್ಲಿಯೂ ಅದೇ ಪ್ರೀತಿ ಮತ್ತು ವಿಶ್ವಾಸದಿಂದ ಯುವರತ್ನ ಚಿತ್ರತಂಡವನ್ನು ಬರಮಾಡಿಕೊಳ್ಳಲಾಯಿತು.

ಅರಮನೆ ನಗರಿಯಲ್ಲಿ ಬೆಳಗ್ಗೆ 10 ಗಂಟೆಗೆ ಮಾನಸ ಗಂಗೋತ್ರಿ ಕ್ಯಾಂಪಸ್​ನಲ್ಲಿ ಓಪನ್ ಏರ್ ಥಿಯೇಟರ್​ನಲ್ಲಿ ಸಾವಿರಾರು ಅಭಿಮಾನಿಗಳು ಪುನೀತ್ ಕಂಡು ಸಂಭ್ರಮಿಸಿದರು. ‘ಅಪ್ಪು ಅಪ್ಪು...’ ಎನ್ನುತ್ತ ಅಭಿಮಾನ ಹೊರಹಾಕಿದರು. ಇಲ್ಲಿಯೂ ಸಹ ಸೇಬು ಹಣ್ಣಿನ ಬೃಹತ್ ಮಾಲೆ ಮತ್ತು ಜೆಸಿಬಿಗಳ ಮೇಲಿಂದ ಹೂಗಳ ಮಳೆ ಸುರಿಸಲಾಯಿತು. ಕಾರಿನ ಬಾನೆಟ್ ಮೇಲೆ ಬಂದು ಅಭಿಮಾನಿಗಳತ್ತ ಕೈ ಬೀಸಿದ ಪುನೀತ್ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಅದೇ ರೀತಿ ಮಂಡ್ಯದ ಸಿಲ್ವರ್ ಜ್ಯೂಬಿಲಿ ಮೈದಾನದಲ್ಲಿಯೂ ‘ಯುವರತ್ನ’ನ ಯುವಸಂಭ್ರಮ ಜೋರಾಗಿತ್ತು. ವೇದಿಕೆ ಮೇಲೆಯೇ ಚಿತ್ರದ ಹಾಡಿಗೆ ನೃತ್ಯ ಮಾಡುವ ಮೂಲಕ ಪುನೀತ್ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net