

ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ರತ್ನನ್ ಪ್ರಪಂಚ', "ಉತ್ತರಕಾಂಡ' ಖ್ಯಾತಿಯ ರೋಹಿತ್ ಪದಕಿ ನಿರ್ದೇಶಿಸುತ್ತಿರುವ, ಯುವರಾಜಕುಮಾರ್ ನಾಯಕನಾಗಿರುವ ಎರಡನೇ ಚಿತ್ರ "ಎಕ್ಕ' ಮುಹೂರ್ತ ನೆರವೇರಿದೆ. ಅಪರೂಪ ಎಂಬಂತೆ ಮೂರು ನಿರ್ಮಾಣ ಸಂಸ್ಥೆಗಳು ಈ ಸಿನಿಮಾ ನಿರ್ಮಿಸುತ್ತಿದ್ದು, ಪಿಆರ್ಕೆ ಪ್ರೊಡಕ್ಷನ್ಸ್ನ ಅಶ್ವಿನಿ ಪುನೀತ್, ಜಯಣ್ಣ ಕಂಬೈನ್ಸ್ನ ಜಯಣ್ಣ&ಭೋಗೇಂದ್ರ ಹಾಗೂ ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ಈ ಚಿತ್ರಕ್ಕೆ ಕೈಜೋಡಿಸಿದ್ದಾರೆ. ಚಿತ್ರದ ಬಗ್ಗೆ ನಿರ್ದೇಶಕ ರೋಹಿತ್, ""ಎಕ್ಕ' ರಾ ಇಂಟೆನ್ಸ್ ಡ್ರಾಮಾ ಚಿತ್ರ. ಈಗಾಗಲೇ ಹಾಡುಗಳು ರೆಡಿಯಾಗಿವೆ. ಪ್ರಿಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಈಗಿನಿಂದಲೇ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ಯುವ ಅವರಲ್ಲಿ ಕನ್ನಡದ ಮುಂದಿನ ಸೂಪರ್ಸ್ಟಾರ್ ಕಾಣಬಹುದು' ಎಂದು ಹೇಳಿಕೊಂಡರು. ಕಥೆ ಕಾಶ್ಮೀರದಲ್ಲಿ ಪ್ರಾರಂಭವಾಗಿ, ಬೆಂಗಳೂರು, ಮೈಸೂರು, ಮುಂಬೈ, ದೆಹಲಿ ಜತೆಗೆ ಹಳ್ಳಿಗಳಲ್ಲೂ ಸಾಗಿ ಕೊನೆಗೆ ಕಾಶ್ಮೀರದಲ್ಲೇ ಅಂತ್ಯವಾಗುತ್ತದೆ.
ನಿರ್ಮಾಪಕಿ ಅಶ್ವಿನಿ, "ಯುವ ಎರಡನೇ ಸಿನಿಮಾ ನಾನೇ ನಿರ್ಮಿಸಬೇಕು ಅಂತ ಕಥೆ ಕೇಳುತ್ತಿದ್ದೆ. ಆದರೆ, ಯಾವುದೂ ಓಕೆ ಆಗಿರಲಿಲ್ಲ. ಈ ಕಥೆ ಇಷ್ಟವಾಯಿತು. ಒಳ್ಳೆ ತಂಡವಿದೆ. ಉತ್ತಮ ಕಥೆಯಿದೆ. ಇದೊಂದು ಕಂಟೆಂಟ್ ಪ್ರಧಾನ ಕಮರ್ಷಿಯಲ್ ಚಿತ್ರ' ಎಂದರು. ನಾಯಕ ಯುವರಾಜಕುಮಾರ್, ""ಎಕ್ಕ' ಪಕ್ಕಾ ಮಾಸ್ ಸಿನಿಮಾ. ಗಟ್ಟಿ ಎಮೋಷನ್ಸ್ ಇವೆ. ಡಾನ್ಸ್ ನಂರ್ಬಸ್ ಕೂಡ ಇರಲಿವೆ. ಪರಿಸ್ಥಿತಿ ಮನುಷ್ಯನನ್ನು ಹೇಗೆ ಬದಲಾಯಿಸುತ್ತೆ ಎಂಬುದರ ಸುತ್ತ ಕಥೆ ಸಾಗುತ್ತದೆ' ಎಂದು ಮಾಹಿತಿ ನೀಡುತ್ತಾರೆ. ಯುವ, ಸಂಪದ ಜತೆ ಅತುಲ್ ಕುಲಕರ್ಣಿ, "ಜಾಲಿ' ಜ್ಯಾಕ್, ರಾಹುಲ್ ದೇವ್ ಶೆಟ್ಟಿ, ಶ್ರುತಿ, ಡಾ> ಸೂರಿ, ಪೂರ್ಣಚಂದ್ರ ಮೈಸೂರು, ಪುನೀತ್ ರುದ್ರನಾಗ್ ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಸತ್ಯ ಹೆಗ್ಡೆ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಇರಲಿದೆ.
6 ತಿಂಗಳಲ್ಲಿ ಬಿಡುಗಡೆ:
ಬಾಲಿವುಡ್ನಲ್ಲಿ ಮುಹೂರ್ತದ ದಿನವೇ ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಿಸುವ ರೂಢಿಯಿದೆ. ಕನ್ನಡದಲ್ಲೂ ಅಪರೂಪಕ್ಕೊಮ್ಮೆ ಚಿತ್ರತಂಡಗಳು ರಿಲೀಸ್ ಡೇಟ್ ಅನೌನ್ಸ್ ಮಾಡುತ್ತವೆ. ಇದೀಗ "ಎಕ್ಕ' ಟೀಮ್ ಕೂಡ ಮುಂದಿನ ಜೂ. 6ರಂದು ಬಿಡುಗಡೆ ದಿನಾಂಕ ಘೋಷಿಸಿದೆ. ಈ ಬಗ್ಗೆ ನಿರ್ಮಾಪಕ ಜಯಣ್ಣ, "ಕನ್ನಡದಲ್ಲಿ ಹಿಟ್ ಸಿನಿಮಾಗಳನ್ನೂ ಒಟಿಟಿಯವರು ಖರೀದಿಸುತ್ತಿಲ್ಲ. ಹೀಗಾಗಿ ಥಿಯೇಟರ್ಗಾಗಿಯೇ ಚಿತ್ರವನ್ನು ಮಾಡುತ್ತಿದ್ದೇವೆ. ಮೂರು ನಿರ್ಮಾಣ ಸಂಸ್ಥೆಗಳು ಸವಾಲಿನಂತೆ ಸ್ವೀಕರಿಸಿ ಈ ಸಿನಿಮಾ ಮಾಡುತ್ತಿದ್ದು, ಆರು ತಿಂಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ.
ಉತ್ತರಕಾಂಡ ನಿಂತಿಲ್ಲ...
ರೋಹಿತ್ ಪದಕಿ ನಿರ್ದೇಶನದಲ್ಲಿ ಕೆಆರ್ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ "ಎಕ್ಕ' ಘೋಷಣೆ ಆದಾಗಿನಿಂದ, ಅವರದೇ ಕಾಂಬಿನೇಷನ್ನ ಡಾಲಿ ಧನಂಜಯ, ಶಿವರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ "ಉತ್ತರಕಾಂಡ' ಚಿತ್ರ ಸ್ಥಗಿತಗೊಂಡಿದೆ ಎಂಬ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ನಿರ್ಮಾಪಕ ಕಾರ್ತಿಕ್, "ಅದೆಲ್ಲ ವದಂತಿ. "ಉತ್ತರಕಾಂಡ' ಚಿತ್ರ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ಶೇಕಡಾ 35ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಮಲ್ಟಿಸ್ಟಾರರ್ ಚಿತ್ರವಾಗಿದ್ದು, ಎಲ್ಲರೂ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಅವರ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಶೂಟಿಂಗ್ ಮುಂದೂಡಿದ್ದೇವೆ. "ಎಕ್ಕ' ಚಿತ್ರೀಕರಣ ಮುಗಿಯುತ್ತಿದ್ದಂತೆಯೇ "ಉತ್ತರಕಾಂಡ' ಪ್ರಾರಂಭಿಸಲಿದ್ದೇವೆ. ಮುಂದಿನ ವರ್ಷ ಸಿನಿಮಾ ಬಿಡುಗಡೆ ಫಿಕ್ಸ್' ಎಂದರು.