

ಬೆಂಗಳೂರು: ಡಾ. ರಾಜಕುಮಾರ್ ಅವರ ಮೊಮ್ಮಗ ಹಾಗೂ ರಾಘವೇಂದ್ರ ರಾಜಕುಮಾರ್ ಮಗ ಯುವ ರಾಜಕುಮಾರ್ ಕೊನೆಗೂ ಹೀರೋ ಆಗಿ ನಟಿಸುವುದು ಪಕ್ಕಾ ಆಗಿದೆ. ಕಳೆದೊಂದು ವರ್ಷದಿಂದ ಹೀರೋ ಆಗುವುದಕ್ಕೆ ಸೂಕ್ತ ತಯಾರಿ ನಡೆಸುತ್ತಿದ್ದ ಯುವ ಅಭಿನಯದ ಮೊದಲ ಚಿತ್ರದ ಫಸ್ಟ್ ಲುಕ್ ಪೋಸ್ಟರ್, ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ.
ಯುವ ಅಭಿನಯದ ಮೊದಲ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ‘ವೈಆರ್ 01’ ಎಂಬ ರ್ವಂಗ್ ಟೈಟಲ್ ಇಟ್ಟು ಚಿತ್ರದ ಕೆಲಸ ಶುರು ಮಾಡಲಾಗಿದೆ. ಈಗಾಗಲೇ ಚಿತ್ರದ ಫೋಟೋ ಶೂಟ್ ಆಗಿದ್ದು, ಯುವ, ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ರುದ್ರನಾಗ್ ಎನ್ನುವವರು ಈ ಚಿತ್ರದ ನಿರ್ದೇಶನ ಮಾಡುತ್ತಿದ್ದು, ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಇನ್ನು ಈ ಚಿತ್ರದ ನಿರ್ವಪಕರು ಯಾರು ಎಂಬ ವಿಷಯವನ್ನು ಪೋಸ್ಟರ್ನಲ್ಲಿ ಬಹಿರಂಗ ಮಾಡಿಲ್ಲ. ಚಿತ್ರರಂಗಕ್ಕೆ ಮಗನ ಎಂಟ್ರಿ ಕುರಿತು ಮಾತನಾಡುವ ರಾಘವೇಂದ್ರ ರಾಜಕುಮಾರ್, ‘ಅಪ್ಪಾಜಿ ಹುಟ್ಟುಹಬ್ಬದ ದಿನ ನನ್ನ ಮಗ ಚಿತ್ರರಂಗ ಪ್ರವೇಶ ಮಾಡುತ್ತಿರುವುದು ಬಹಳ ಖುಷಿಯ ವಿಷಯ. ಇದು ಈಗ ಮಾಡಿದ ಫೋಟೋ ಶೂಟ್ ಅಲ್ಲ, ಕೆಲವು ದಿನಗಳ ಹಿಂದೆಯೇ ಆಗಿತ್ತು. ಅಪ್ಪಾಜಿ ಹುಟ್ಟುಹಬ್ಬದ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಯೋಚನೆ ಇತ್ತು. ಆದರೆ, ಇದು ಸಂಭ್ರಮಪಡುವ ಹೊತ್ತಲ್ಲ. ಎಲ್ಲಾ ಕಡೆ ಲಾಕ್ಡೌನ್ ಇರುವುದರಿಂದ, ಸರಳವಾಗಿ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಅಪ್ಪಾಜಿ ಹುಟ್ಟುಹಬ್ಬದ ದಿನ ಮಗನನ್ನು ಜನರ ಮಡಿಲಿಗೆ ಹಾಕಬೇಕು ಅಂತ ಆಸೆ ಇತ್ತು. ಅದೇ ಕಾರಣಕ್ಕೆ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ’ ಎನ್ನುತ್ತಾರೆ ರಾಘವೇಂದ್ರ ರಾಜಕುಮಾರ್.