

ತಾಪ್ಸಿ ಪನ್ನು ಅಭಿನಯದ ಬಗ್ಗೆ, ಆಕೆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಈ ಮುಂಚೆ ಯಾರೂ ಚಕಾರವೆತ್ತಿರಲಿಲ್ಲ. 'ಮುಲ್ಕ್', 'ಬದ್ಲಾ', 'ಪಿಂಕ್' ಮುಂತಾದ ಚಿತ್ರಗಳಲ್ಲಿನ ಅಭಿನಯದ ಬಗ್ಗೆ ತಾಪ್ಸಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಆದರೆ, ಇತ್ತೀಚೆಗೆ ಕಂಗನಾ ರಣಾವತ್ ಮಾತ್ರ ತಾಪ್ಸಿಯನ್ನ ಒಬ್ಬ ಬಿ-ಗ್ರೇಡ್ ನಟಿ ಎಂದು ಕರೆದರು. ಆ ನಂತರ ಈ ವಿಷಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಅದರಲ್ಲೂ ತಾಪ್ಸಿ ಅಭಿನಯದ ಬಗ್ಗೆ ಕಂಗನಾ ಈ ರೀತಿ ಮಾತನಾಡಬಾರದಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಿದೆ.
ಈಗ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ಮತ್ತು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಅಭಿಪ್ರಾಯ ಪಟ್ಟಿದ್ದಾರೆ. 'ಮುಲ್ಕ್' ಚಿತ್ರದಲ್ಲಿ ತಾಪ್ಸಿ ನಿರ್ವಹಿಸಿದ ಲಾಯರ್ ಪಾತ್ರದಿಂದ ಬಹಳ ಖುಷಿಯಾಗಿರುವ ಅವರು, ಟ್ವಿಟರ್ನಲ್ಲಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ತಾಪ್ಸಿ ನೀನು ಬಿ-ಗ್ರೇಡ್ ನಟಿಯಲ್ಲ, ಏ-ಗ್ರೇಡ್ ನಟಿ' ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ''ಮುಲ್ಕ್' ಚಿತ್ರದಲ್ಲಿನ ಲಾಯರ್ ಪಾತ್ರದಲ್ಲಿ ಬಹಳ ನೈಜವಾಗಿ ನಟಿಸಿದ್ದೀರಿ. ನೀವು ನಿಜವಾಗಲೂ ಲಾಯರ್ ಆಗಿ, ನನ್ನ ಕೋರ್ಟ್ನಲ್ಲಿ ವಾದ ಮಾಡಬೇಕಿತ್ತು' ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಇನ್ನಷ್ಟು ಮಾತನಾಡಿರುವ ಅವರು, 'ನಾನು 20 ವರ್ಷಗಳ ಕಾಲ ವಕೀಲನಾಗಿದ್ದೆ ಮತ್ತು 20 ವರ್ಷಗಳ ಕಾಲ ನ್ಯಾಯಮೂರ್ತಿಯಾಗಿದ್ದೆ. ಹಲವು ವಕೀಲರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. 'ಮುಲ್ಕ್' ಚಿತ್ರದಲ್ಲಿ ನಿನ್ನ ಅಭಿನಯ ಅದೆಷ್ಟು ನೈಜವಾಗಿತ್ತು ಎಂದರೆ, ನೀನು ನಿಜಕ್ಕೂ ಲಾಯರ್ ಇರಬಹುದು ಎಂದುಕೊಂಡಿದ್ದೆ. ಪಾತ್ರ ಮಾಡುವುದಕ್ಕೆ ಯಾರಿಂದಾದರೂ ತರಬೇತಿ ಪಡೆದಿದ್ದೀಯ' ಎಂದು ಅವರು ಪ್ರಶ್ನಿಸಿದ್ದಾರೆ.
ಹಿರಿಯ ನ್ಯಾಯಮೂರ್ತಿಯೊಬ್ಬರು ತನ್ನ ಅಭಿನಯದ ಬಗ್ಗೆ ಮೆಚ್ಚಿ ಮಾತನಾಡಿರುವುದಕ್ಕೆ ಖುಷಿ ವ್ಯಕ್ತಪಡಿಸಿರುವ ತಾಪ್ಸಿ, 'ಚಿತ್ರೀಕರಣ ಸಮಯದಲ್ಲಿ ಒಬ್ಬರು ಲಾಯರ್ ನಮ್ಮ ಜತೆಗೇ ಇದ್ದರು. ಅವರಿಂದ ಹಲವು ವಿಷಯಗಳನ್ನು ಕಲಿತಿದ್ದೇನೆ. ಹಾಗಾಗಿ ಚೆನ್ನಾಗಿ ನಟಿಸುವುದಕ್ಕೆ ಸಾಧ್ಯವಾಯಿತು' ಎಂದು ತಾಪ್ಸಿ ಹೇಳಿದ್ದಾರೆ.