'ನೀವು ಹೇಡಿಗಳು'..; ಹನುಮಂತ ವೇಷಧಾರಿ ಹಾಡಿದ್ದ ವಿಡಿಯೋ ಪೋಸ್ಟ್​​ಗೆ ಕೆಟ್ಟ ಕಾಮೆಂಟ್, ನಟಿ ಸುಹಾಸಿನಿ ಕೆಂಡ..Suhasini Maniratnam

'ನೀವು ಹೇಡಿಗಳು'..; ಹನುಮಂತ ವೇಷಧಾರಿ ಹಾಡಿದ್ದ ವಿಡಿಯೋ ಪೋಸ್ಟ್​​ಗೆ ಕೆಟ್ಟ ಕಾಮೆಂಟ್, ನಟಿ ಸುಹಾಸಿನಿ ಕೆಂಡ..Suhasini Maniratnam
Published on: 
  • ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡು ಹಾಡಿದ್ದ ಹನುಮ ವೇಷಧಾರಿ ಹಾಡು ಪೋಸ್ಟ್ ಮಾಡಿದ ಸುಹಾಸಿನಿ.

  • ಹಬ್ಬಕ್ಕೆ ಶುಭಾಷಯ ಕೋರುವವರ ಜೊತೆಗೆ ಕೆಟ್ಟ ಕಾಮೆಂಟ್​ಗಳ ಸುರಿಮಳೆ.

  • ನೀವು ನೋಡಲಿ ಎಂದು ಪೋಸ್ಟ್ ಮಾಡುತ್ತಿಲ್ಲ..ನಿಮಗೆ ನನ್ನ ಪೋಸ್ಟ್​ಗೆ ಕಾಮೆಂಟ್ ಮಾಡುವ ಹಕ್ಕಿಲ್ಲ ಎಂದು ಕಿಡಿ.

ಬಹುಭಾಷಾ ನಟಿ ಸುಹಾಸಿನಿ ಅವರು ಇತ್ತೀಚೆಗೆ ಹನುಮನ ವೇಷಧಾರಿ ಹಾಡಿದ್ದ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡನ್ನು ಪೋಸ್ಟ್ ಮಾಡಿ, ನನ್ನ ದೀಪಾವಳಿ ಆರಂಭ ಹೀಗಿತ್ತು ಎಂದು ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಇದಕ್ಕೆ ಕೆಲವರು ಮೆಚ್ಚುಗೆಯ ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಸಾಕಷ್ಟು ಟ್ರೋಲ್ ಮಾಡಿದ್ದರು. ಸದ್ಯ ಈ ವಿರುದ್ಧ ನಟಿ ಕೆಂಡಕಾರಿದ್ದಾರೆ.

ಸುಹಾಸಿನಿ ಪೋಸ್ಟ್​ನಲ್ಲಿ ಏನಿದೆ?

'ನಿಮಗೆ ಪರಿಚಯವೇ ಇಲ್ಲದ, ನೀವು ಯಾರೆಂದು ಎಂದಿಗೂ ತಿಳಿದುಕೊಳ್ಳೋಕೆ ಬಯಸದ ವ್ಯಕ್ತಿ ಬಗ್ಗೆ ಮಾತನಾಡಲು ನಿಮಗೆ ಎಷ್ಟು ಧೈರ್ಯ. ಸೋಶಿಯಲ್​ ಮೀಡಿಯಾದಲ್ಲಿ ನಿಮ್ಮ ರಿಯಲ್​ ಹೆಸರು ಉಲ್ಲೇಖಿಸದೆ, ಅನಾಮಧೇಯರಾಗಿ ಅಡಗಿ ಕುಳಿತು ಕೆಟ್ಟ ಕಾಮೆಂಟ್ ಮಾಡುವ ಹಕ್ಕು ಕೊಟ್ಟಿದ್ದು ಯಾರು? ಪ್ರಸಿದ್ಧ ವ್ಯಕ್ತಿಗಳು ಅದಲ್ಲೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸೈಬರ್​ ದಾಳಿ ಮಾಡುವ ನೀವು ಹೇಡಿಗಳು' ಎಂದು ಕಿಡಿಕಾರಿದ್ದಾರೆ

'ನಿಮ್ಮ ಮನೆಯಲ್ಲಾಗಲಿ, ಕೆಲಸದ ಜಾಗದಲ್ಲಿ ಆಗಲಿ ಮಹಿಳೆಯರೊಂದಿಗೆ ಅಥವಾ ನಿಮಗಿಂತ ಹಿರಿಯರೊಂದಿಗೆ ಹೀಗೆ ನಡೆದುಕೊಳ್ಳಲು ನಿಮ್ಮಿಂದ ಸಾಧ್ಯವೇ? ಹಾಗೆ ಮಾಡಿದರೆ ನಿಮ್ಮನ್ನು ಮನೆಯಿಂದ ಅಥವಾ ಕೆಲಸದ ಸ್ಥಳದಿಂದ ಹೊರಹಾಕುತ್ತಾರೆ. ಅಸಂಬದ್ಧ ಕಾಮೆಂಟ್‌ಗಳನ್ನು ಮಾಡಲು ಅಥವಾ ಪೋಸ್ಟ್ ಮಾಡಲು ನನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಿಮಗೆ ಅವಕಾಶ ಇಲ್ಲ. ದಯವಿಟ್ಟು ತೊಲಗಿ. ನನ್ನ ಪೋಸ್ಟ್‌ಗಳನ್ನು ನೋಡಬೇಡಿ, ಏಕೆಂದರೆ ನಾನು ಅವನ್ನು ನಿಮಗಾಗಿ ಬರೆಯುತ್ತಿಲ್ಲ. ವಾಪಸ್ ಬರಬೇಡಿ' ಎಂದು ಕಿಡಿಕಾರಿದ್ದಾರೆ.

ಬ್ಲಾಕ್ ಮಾಡಿ

'ಈ ಮೂರ್ಖರನ್ನು ಎದುರಿಸುತ್ತಲೇ, ಅವರನ್ನು ಕಡೆಗಣಿಸುವ ಮೂಲಕ ಉತ್ತಮ ಮಾನವರಾಗಿ ಉಳಿದಿರುವ ಎಲ್ಲರಿಗೂ ಧನ್ಯವಾದಗಳು. ವಾಸ್ತವವಾಗಿ ನಾವು ಇಂತಹ ಮನಸ್ಥಿರತಿ ಉಳ್ಳವರನ್ನು ಕಡೆಗಣಿಸಬೇಕಾಗಿಲ್ಲ, ಸಾಕು ಇನ್ನು ಸಾಕು. ಅವರನ್ನು ಬ್ಲಾಕ್ ಮಾಡಿ' ಎಂದು ಸಲಹೆ ಕೊಟ್ಟಿದ್ದಾರೆ.

ಹಳೆ ಪೋಸ್ಟ್​ನಲ್ಲಿ ಏನಿತ್ತು?

ಸುಹಾಸಿನಿ ಅವರು ಭಾನುವಾರ ಹಂಚಿಕೊಂಡ ಪೋಸ್ಟ್​ನಲ್ಲಿ ಅವರು ಹನುಮಾನ್​ ವೇಷಧಾರಿಯನ್ನು ಮಳೆಯಿಂದ ರಕ್ಷಿಸಲು ಛತ್ರಿ ಹಿಡಿದಿದ್ದರು. ಆತ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡನ್ನು ಸೊಗಸಾಗಿ ಹಾಡಿದ್ದ. ಇದಕ್ಕೆ ನನ್ನ ದೀಪಾವಳಿ ಹೀಗೆ ಸೊಗಸಾಗಿ ಆರಂಭವಾಯ್ತು ಎಂದು ಪೋಸ್ಟ್ ಹಂಚಿಕೊಂಡಿದ್ದರು. ಇದಕ್ಕೆ ನಟಿ ಅದಿತಿ ರಾವ್​ ಹೈದರಿ, ಮಂಜಮ್ಮ ಜೋಗತಿ, ನಿರ್ದೇಶಕ ಶ್ರೀನಿಧಿ ಬೆಂಗಳೂರು ಹಬ್ಬಕ್ಕೆ ವಿಷ್ ಮಾಡಿದ್ದರು.

ಇನ್ನೂ ಮಂಜಮ್ಮ ಜೋಗತಿ ಅವರು ಹೀಗೆಂದು ಕಾಮೆಂಟ್ ಮಾಡಿದ್ದರು, ಸುಂದರ ಅಂಥವರನ್ನು ಕಂಡರೆ ನಗೋರೆ ಜಾಸ್ತಿ ನೀವು ಅವರ ಜೊತೆಗೆ ಒಂದೆರಡು ನಿಮಿಷಗಳ ಕಾಲ ಸಮಯ ಕಳೆದಿದ್ದು ತುಂಬಾ ಖುಷಿ ನೀಡಿತು ದೇವರು ಒಳ್ಳೆಯದು ಮಾಡಲಿ ಎಂದಿದ್ದಾರೆ. ಇದೇ ಪೋಸ್ಟ್​ಗೆ ಹೆಚ್ಚು ಕೆಟ್ಟ ಕಾಮೆಂಟ್​ಗಳು ಕೇಳಿಬಂದಿತ್ತು, (ಏಜೆನ್ಸೀಸ್).