ಪರೀಕ್ಷೆನಾ ಬಡಿಯಾ ಅನ್ನೋದೇಕೆ ಭಟ್ರು?: ಎಕ್ಸಾಂ ಟೆನ್ಷನ್ ಬಗ್ಗೆ ಯೋಗರಾಜ್ ಭಟ್ ಸಾಂಗ್

Gaalipata
Published on

ಬೆಂಗಳೂರು: ನಿರ್ದೇಶಕ ಯೋಗರಾಜ್ ಭಟ್ ಆಗಾಗ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂಥ ಹಾಡುಗಳನ್ನು ಬರೆಯುತ್ತಿರುತ್ತಾರೆ. ಚುನಾವಣೆಯ ಸಮಯದಲ್ಲಿ ಒಂದು, ಐಪಿಎಲ್ ಟೈಮಲ್ಲೊಂದು ಹಾಡು ಬರೆದಿದ್ದ ಅವರು, ಈಗ ತಾವು ನಿರ್ದೇಶನ ಮಾಡುತ್ತಿರುವ ‘ಗಾಳಿಪಟ-2’ ಚಿತ್ರಕ್ಕಾಗಿ ಎಕ್ಸಾಮ್ ಟೆನ್ಷನ್ ಬಗ್ಗೆ ಹಾಡು ಬರೆದಿದ್ದಾರೆ.

ಗಣೇಶ್, ದಿಗಂತ್, ‘ಲೂಸಿಯಾ’ ಪವನ್​ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾದ ಶೇ. 60 ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ. ಈ ಗ್ಯಾಪ್​ನಲ್ಲಿ ಪರೀಕ್ಷೆ ಸೀಸನ್ ಸಹ ಶುರುವಾಗಿರುವುದರಿಂದ ‘ಪರೀಕ್ಷೆನಾ ಬಡಿಯಾ’ ಎಂದು ಆರಂಭವಾಗುವ ಹಾಡನ್ನು ಭಟ್ಟರು ಬರೆದಿದ್ದಾರೆ. ‘ಪರೀಕ್ಷೆ ಎನ್ನುವುದು ಎಲ್ಲರ ಬದುಕಲ್ಲಿಯೂ ಕಾಡುವಂಥದ್ದು. ಕಾಲೇಜಿನಿಂದ ಹೊರಬಂದು 50-60 ವರ್ಷಗಳಾದರೂ ಎಕ್ಸಾಂ ಟೆನ್ಷನ್ ಬಗ್ಗೆ ಕನಸುಗಳು ಬೀಳುತ್ತಲೇ ಇರುತ್ತವೆ. ಇದರಲ್ಲಿ ಪರೀಕ್ಷೆಗಾಗಿ ಓದುವ ವಿದ್ಯಾರ್ಥಿಗಳ ತಲ್ಲಣಗಳನ್ನು ಹೇಳಿದ್ದೇನೆ. ಜತೆಗೆ ಪರೀಕ್ಷೆಯನ್ನು ಒಂದು ರೀತಿಯಲ್ಲಿ ವ್ಯಂಗ್ಯ ಮಾಡಿದ್ದೇನೆ’ ಎಂದು ಹೇಳುತ್ತಾರೆ ಯೋಗರಾಜ್ ಭಟ್.

ಈ ಹಾಡನ್ನು ಕುದುರೆಮುಖದಲ್ಲಿ ಭಟ್ಟರು ಈಗಾಗಲೇ ಚಿತ್ರೀಕರಿಸಿದ್ದಾರೆ. ಮೂವರು ನಾಯಕರೂ ಈ ಹಾಡಿನಲ್ಲಿದ್ದಾರೆ. ಮೊದಲ ‘ಗಾಳಿಪಟ’ದ ಮೂಲಕ ಜಯಭೇರಿ ಬಾರಿಸಿದ್ದ ಭಟ್ಟರು ಈ ಬಾರಿ ಮತ್ತೊಂದು ಯೂತ್ ಎಂಟರ್​ಟೇನಿಂಗ್ ಸಿನಿಮಾ ಮಾಡುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಅದರಲ್ಲಿ ಶರ್ವಿುಳಾ ಮಾಂಡ್ರೆ ಕಾಲೇಜಿನ ಯಂಗೆಸ್ಟ್ ಉಪನ್ಯಾಸಕಿಯಾಗಿ ಕಾಣಿಸಿಕೊಂಡಿದ್ದಾರೆ. ಗಣೇಶ್, ದಿಗಂತ್, ಪವನ್ ಮೂರು ಜನ ಈ ಕಾಲೇಜಿನಲ್ಲಿ ಓದುತ್ತಿರುತ್ತಾರೆ ಎಂಬ ಮಾಹಿತಿ ಲಭಿಸಿದೆ. ಶರ್ವಿುಳಾ ಪಾತ್ರದ ಬಗ್ಗೆ ಅಷ್ಟೇನೂ ಬಿಟ್ಟುಕೊಡದ ಭಟ್ಟರು ಅದನ್ನು ಸಿನಿಮಾದಲ್ಲಿಯೇ ನೋಡಿ ಎನ್ನುತ್ತಾರೆ. ರಮೇಶ್ ರೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ‘ಮುಗುಳು ನಗೆ’ ಆದ ಮೇಲೆ ಗಣೇಶ್ ಮತ್ತು ಯೋಗರಾಜ್ ಭಟ್ ಈ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಸದ್ಯದಲ್ಲೇ ಚಿತ್ರತಂಡ ಶೂಟಿಂಗ್​ಗಾಗಿ ವಿದೇಶಕ್ಕೆ ಹೋಗಲಿದೆ.

ಪರೀಕ್ಷೆ ಎನ್ನುವುದು ಪ್ರತಿ ಯೊಬ್ಬನಿಗೂ ಕಬ್ಬಿಣದ ಕಡಲೆಯಂತೆ. ಅಂಥದ್ದೊಂದು ವ್ಯವಸ್ಥೆಯನ್ನು ದಾಟದೆ ಬಂದವರು ಯಾರೂ ಇಲ. ಹಾಗಾಗಿ ಈ ಹಾಡನ್ನು ಬರೆದಿದ್ದೇನೆ. | ಯೋಗರಾಜ್ ಭಟ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net