ಮನದ ಕಡಲಿಗೆ ಕುಂಬಳಕಾಯಿ: ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ

manada kadalu
Published on

ಬೆಂಗಳೂರು: ‘ಮುಂಗಾರು ಮಳೆ’ ಸಿನಿಮಾ ತೆರೆಕಂಡು 18 ವರ್ಷಗಳ ಬಳಿಕ ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಿರ್ಮಾಪಕ ಇ.ಕೃಷ್ಣಪ್ಪ ‘ಮನದ ಕಡಲು’ ಮೂಲಕ ಮತ್ತೆ ಒಂದಾಗಿರುವುದು ಗೊತ್ತಿದೆ. ಈ ಸಿನಿಮಾದಲ್ಲಿ ‘ಫಿಸಿಕ್ಸ್ ಟೀಚರ್’ ಸುಮುಖ ನಾಯಕನಾಗಿದ್ದು, ಅವರಿಗೆ ಅಂಜಲಿ ಅನೀಶ್ ಹಾಗೂ ರಾಶಿಕಾ ಶೆಟ್ಟಿ ಜೋಡಿಯಾಗಿದ್ದಾರೆ. ಇತ್ತೀಚೆಗಷ್ಟೆ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ‘ತುರ‌್ರಾ’ ಎಂದು ಸಾಗುವ ಚಿತ್ರದ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ. ಅರ್ಥವಿಲ್ಲದ, ಅರ್ಥವಾಗದ ಪದಗಳನ್ನೇ ಸೇರಿಸಿ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ವಿ. ಹರಿಕೃಷ್ಣ ಸಂಗೀತ ನೀಡಿದ್ದು, ಸಂಜಿತ್ ಹೆಗ್ಡೆ, ಪ್ರಾರ್ಥನಾ ಜತೆ ಅವರೂ ಹಾಡಿಗೆ ಧ್ವನಿಗೂಡಿಸಿದ್ದಾರೆ. ಸಾಂಗ್‌ನಲ್ಲಿ ಸುಮುಖ, ಅಂಜಲಿ ಅನೀಶ್, ರಂಗಾಯಣ ರಘು ಸೇರಿ ಹಲವರು ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ವಿ.ಹರಿಕೃಷ್ಣ, ‘ಇದು ಖುಷಿಯಿಂದ ಹಾಡಿದ ಹಾಡಲ್ಲ. ಲಿರಿಕ್ಸ್ ಶೀಟ್ ಹಿಡಿದು ತುಂಬಾ ಕಷ್ಟಪಟ್ಟು ಹಾಡಿದ ಹಾಡು. ವಿಶಿಷ್ಠ ಸಾಹಿತ್ಯದ ಮೂಲಕ ಜನರನ್ನು ಮೆಚ್ಚಿಸುವುದೇ ದೊಡ್ಡ ಕೆಲಸ, ಅದನ್ನು ‘ತುರ‌್ರಾ’ ಹಾಡು ಮಾಡುತ್ತದೆ. ಇಲ್ಲಿ ಭಾಷೆಯೇ ಮಾತನಾಡುತ್ತದೆ. ಮೀನಿಂಗ್ ಏನು ಎಂದು ಕೇಳಿದರೆ, ಮುಖದಲ್ಲಿ ಸ್ಮೈಲ್ ಹೊರಹೊಮ್ಮುತ್ತದೆ ಅಷ್ಟೇ’ ಎಂದರು.

ಆಲಿಮಾ ಕೊಟ್ಟ ಪದ ‘ತುರ್ರಾ: ಯೋಗರಾಜ್ ಭಟ್ ಹಾಡಿನ ವಿಶೇಷತೆ ಕುರಿತು, ‘ಚಿತ್ರಕ್ಕೆ ಇದೇ ಜಾಗದಲ್ಲಿ ಮುಹೂರ್ತವಾಗಿತ್ತು, ಇದೀಗ ಇಲ್ಲಿಯೇ ಕುಂಬಳಕಾಯಿ ಒಡೆಯಲಾಗಿದೆ. ಈ ಹಿಂದೆ ‘ಚಿಂಗಾರಿ’ಯಲ್ಲಿ ನಾನು ಅನರ್ಥ ಪದಗಳನ್ನೇ ಇಟ್ಟುಕೊಂಡು ಒಂದು ಸಾಂಗ್ ರಚಿಸಿದ್ದೆ. ಅದು ಹಿಟ್ ಆಗಿತ್ತು. ಇದೀಗ ಮತ್ತೆ ‘ತುರ್ರಾ’ ಸಾಂಗ್‌ನಲ್ಲಿ ಮತ್ತೆ ಪ್ರಯತ್ನಿಸಿದ್ದೇವೆ. ಅನರ್ಥವೇ ಹಾಡಿನ ವಿಶೇಷತೆ. ಅರ್ಥಕ್ಕಿಂತ ಹೆಚ್ಚು ಅನರ್ಥಕ್ಕೆ ಶಕ್ತಿಯಿದೆ. ನಾನು ಹುಚ್ಚುತನವನ್ನು ಇಷ್ಟಪಡುವೆ. ನಮ್ಮೂರಿನಲ್ಲಿ ಆಲಿಮಾ ಎಂಬ ಹುಚ್ಚ ಇದ್ದ. ಆ ಯಾವಾಗಲೂ ‘ತುರ‌್ರಾ’ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಆ ಪದವನ್ನೇ ಬಳಸಿ ಈ ಸಾಂಗ್ ಮಾಡಿದ್ದೇನೆ. ಮನುಷ್ಯನಲ್ಲಿ ಪರಿಶುದ್ಧವಾದ ಹುಚ್ಚುತನ ಇದ್ದಾಗಲೇ ಸಾಧನೆ ಮಾಡುವುದು. ಲೋಕವನ್ನು ತುಂಬಾ ಪ್ರೀತಿಸುವವರೇ ಹುಚ್ಚರು’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net