

ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಹಾಡೊಂದನ್ನು ಬಿಡುಗಡೆ ಮಾಡುವ ಬಗ್ಗೆ ಇತ್ತೀಚೆಗಷ್ಟೇ ನಿರ್ದೇಶಕ ಯೋಗರಾಜ್ ಭಟ್ ಹೇಳಿಕೊಂಡಿದ್ದರು. ಇದೀಗ ಆ ಹಾಡು ಹೊರಬಂದಿದೆ. ಕರೊನಾ ಅನ್ನೋ ಮಹಾಮಾರಿಯಿಂದ ಪ್ರಸ್ತುತ ಸ್ಥಿತಿಗತಿ ಹೇಗಿದೆ ಎಂಬುದನ್ನು ಹಾಡಿನಲ್ಲಿ ಮನಮುಟ್ಟುವಂತೆ ತೋರಿಸಿದ್ದಾರೆ ಭಟ್ರು.
ಕರೊನಾ ವಾರಿಯರ್ಸ್ ಎಂದೇ ಹೇಳಾಗುತ್ತಿರುವ ಪೊಲೀಸ್ ಇಲಾಖೆ, ವೈದ್ಯರು,. ಪೌರಕಾರ್ಮಿಕರು ಮತ್ತು ಮಾಧ್ಯಮವನ್ನು ಗಮನದಲ್ಲಿಟ್ಟುಕೊಂಡು ‘ಊರಿಗೂರೇ ಖಾಲಿ; ದಾರಿ ತುಂಬ ಬೇಲಿ..’ ಸಾಹಿತ್ಯವುಳ್ಳ ಹಾಡನ್ನು ಭಟ್ರು ರಚಿಸಿದ್ದಾರೆ. ಆ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ವಿಜಯ್ ಪ್ರಕಾಶ್ ಕಂಠದಲ್ಲಿ ಹಾಡಿನ ಅಂದ ಮತ್ತಷ್ಟು ಹೆಚ್ಚಿದೆ.
ಬೆಂಗಳೂರಿನಲ್ಲಿಯೇ ಪೂರ್ತಿ ಹಾಡಿನ ಚಿತ್ರೀಕರಣ ಮಾಡಿದ್ದು, ಉದಯ್ ಲೀಲಾ ಕ್ಯಾಮರಾ ಕಣ್ಣಲ್ಲಿ ಖಾಲಿಯಾದ ಸಿಲಿಕಾನ್ ಸಿಟಿ ಮೂಡಿಬಂದಿದೆ. ಅಶೋಕ್ ವಿ ರಾಮನ್ ಮತ್ತು ಅನಂತ್ ಡ್ರೋಣ್ ಕ್ಯಾಮರಾ ಮೂಲಕ ಹಾಡಿಗೆ ಮತ್ತೊಂದಿಷ್ಟು ಮೆರುಗು ನೀಡಿದ್ದಾರೆ.
ವಿಶೇಷ ಏನೆಂದರೆ, ಈ ಹಾಡಿನಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಸುಧಾ ಮೂರ್ತಿ, ಶ್ರೀರಾಮುಲು ಸೇರಿ ಪೊಲೀಸ್ ಇಲಾಖೆ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ಮಾಧ್ಯಮದವರೂ ಕಾಣಿಸಿದ್ದಾರೆ.