

ಬೆಂಗಳೂರು: ನಿರ್ದೇಶಕ ಯೋಗರಾಜ್ ಭಟ್ ಆಗೊಮ್ಮೆ ಈಗೊಮ್ಮೆ ತೆರೆ ಮೇಲೂ ಮಿಂಚುತ್ತಾರೆ. ಈಗ ಅವರು ‘ಹರಿಕಥೆ ಅಲ್ಲ ಗಿರಿಕಥೆ’ದಲ್ಲೂ ಒಂದು ವಿಶೇಷ ಪಾತ್ರ ಮಾಡಿದ್ದಾರೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಯೋಗರಾಜ್ ಭಟ್ ಅವರು ನಿರ್ದೇಶಕನ ಪಾತ್ರದಲ್ಲೇ ನಟಿಸಿದ್ದಾರೆ. ‘ಹರಿಕಥೆ ಅಲ್ಲ ಗಿರಿಕಥೆ’ ಒಬ್ಬ ಸಿನಿಮಾ ನಿರ್ದೇಶಕನ ಜೀವನದ ಕುರಿತ ಕಥೆಯಾಗಿದ್ದು, ರಿಷಬ್ ಶೆಟ್ಟಿ ನಾಯಕನಾಗಿದ್ದಾರೆ. ಕರಣ್ ಅನಂತ್ ಮತ್ತು ಅನಿರುದ್ಧ ಮಹೇಶ್ ಇಬ್ಬರೂ ಸೇರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸಂದೇಶ್ ನಾಗರಾಜ್ ನಿರ್ವಿುಸಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ, ಚಂದ್ರಶೇಖರ್ ಮತ್ತು ರಂಗನಾಥ್ ಛಾಯಾಗ್ರಹಣವಿದೆ.
ಚಿತ್ರದ ಕುರಿತು ಮಾತನಾಡುವ ರಿಷಬ್, ‘ಇದೊಬ್ಬ ಸಹಾಯಕ ನಿರ್ದೇಶಕನ ಕಥೆ. ಬಹಳಷ್ಟು ಹೊಸಬರು ಇರುವ ತಂಡ ಇದು. ಇಲ್ಲಿ ನಾನು ಲೀಡ್ ಎನ್ನುವುದಕ್ಕಿಂತ, ಈ ಚಿತ್ರದ ಒಂದು ಬಹುಮುಖ್ಯ ಪಾತ್ರ ಮಾಡಿದವರು ಹೊನ್ನವಳ್ಳಿ ಕೃಷ್ಣ ಅವರು. ನಿಜಜೀವನದಲ್ಲಿ ನೂರಾರು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆದರೆ, ಅವರಿಗೆ ಸ್ವತಂತ್ರ ನಿರ್ದೇಶಕರಾಗುವುದಕ್ಕೆ ಸಾಧ್ಯವಾಗಲಿಲ್ಲ. ಅಂಥದ್ದೇ ಒಂದು ವಿಷಯವನ್ನು ಇಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ನಾನು ಅವರ ಮಗನಾಗಿ ಕಾಣಿಸಿಕೊಂಡಿದ್ದೇನೆ. ಇದು ಅವರ ನಿಜಜೀವನದ ಕಥೆಯಲ್ಲ. ಇದೊಂದು ಕಾಲ್ಪನಿಕ ಕಥೆ’ ಎನ್ನುತ್ತಾರೆ ರಿಷಬ್. ತಪಸ್ವಿನಿ ಪೊನ್ನಚ ಮತ್ತು ರಚನಾ ಇಂದರ್ ಈ ಚಿತ್ರಕ್ಕೆ ನಾಯಕಿಯಾಗಿದ್ದು, ಚಿತ್ರ ಇದೇ ಜೂನ್ 23ರಂದು ತೆರೆಗೆ ಬರಲಿದೆ.