Yellige Payana Yaavudo Daari Review ; ಸೇಡಿನ ದಾರಿಯಲ್ಲಿ ಕಾಡುವ ಅಮರ ಪ್ರೇಮಕಾವ್ಯ

fgdfgfdgd
Published on

ಚಿತ್ರ: ಎಲ್ಲಿಗೆ ಪಯಣ ಯಾವುದೋ ದಾರಿ

ನಿರ್ದೇಶನ: ಕಿರಣ್​ ಸೂರ್ಯ

ನಿರ್ಮಾಣ: ಜತಿನ್​ ಮತ್ತು ಚೇತನ್​

ತಾರಾಗಣ: ಅಭಿಮನ್ಯು ಕಾಶೀನಾಥ್​, ಸ್ಪೂರ್ತಿ, ಬಲರಾಜವಾಡಿ, ಶೋಭನ್​, ಪ್ರದಿಪ್​, ಅಯಾಂಕ್​, ವಿಜಯಶ್ರೀ ಮತ್ತು ಮುಂತಾದವರು.

| ಹರ್ಷವರ್ಧನ್​ ಬ್ಯಾಡನೂರು

"ನಂದೊಂಥರಾ ಭಯಂಕರ ಕಥೆ. ನಿಜೀರ್ವ ವಸ್ತುಗಳಿಗೆ ಜೀವ ಕೊಡ್ತೀನಿ. ಜೀವಂತ ವಸ್ತುಗಳ ಜೀವ ತೆಗಿತೀನಿ. ನಾನೊಬ್ಬ ಕಲಾವಿದ' ಅಂತಾನೆ ಅಮರ್​ (ಅಭಿಮನ್ಯು). ಮೈಸೂರಿನಿಂದ ವಿರಾಜಪೇಟೆಗೆ ಹೊರಟ ಅಮರ್​ಗೆ ಐವರು ಆಗಂತುಕರು ಒಬ್ಬೊಬ್ಬರಾಗಿ ಡ್ರಾಪ್​ ಕೇಳುತ್ತಾ ಜತೆಯಾಗುತ್ತಾರೆ. ಕಟ್ಟಡಗಳಿಗೆ ಬಣ್ಣ ಬಳಿಯುವ ಸಂಪತ್​ ಲೂಯಿಸ್​ (ಶೋಭನ್​), ಗೆಳತಿಯ ಜತೆ ಆಕೆಯ ಬಾಯ್ ಫ್ರೆಂಡ್​​ ಭೇಟಿಯಾಗಲು ಬಂದು ಬಸ್​ ತಪ್ಪಿಸಿಕೊಳ್ಳುವ ಕಾಲೇಜು ವಿದ್ಯಾರ್ಥಿನಿ ನೀತು ಬೋಪಯ್ಯ (ವಿಜಯಶ್ರೀ), ಕಾರ್​ ಮೆಕ್ಯಾನಿಕ್​ ಇಮ್ರಾನ್​ (ಅಯಾಂಕ್​), ೋಟೋಗ್ರಾರ್​ (ಪ್ರದಿಪ್​) ಜತೆಗೆ ಡಾಕ್ಟರ್​. ಅದೇ ಸಮಯದಲ್ಲಿ ವಿರಾಜಪೇಟೆಯಲ್ಲಿ ಇಬ್ಬರು ಮಹಿಳೆಯರ ಕೊಲೆಯಾಗಿರುತ್ತದೆ. ಒಂದೆಡೆ ಸೈಕೋ ಸೀರಿಯಲ್​ ಕಿಲ್ಲರ್​ಗಾಗಿ ಮತ್ತೊಂದೆಡೆ ಮಿಸ್ಸಿಂಗ್​ ಆಗಿರುವ ಬೋಪಯ್ಯ (ಬಲರಾಜವಾಡಿ) ಮಗಳ ಹುಡುಕಾಟವೂ ನಡೆಯುತ್ತಿರುತ್ತದೆ. ಈ ಐವರಿಗೂ ಆ ಸರಣಿ ಕೊಲೆಗಳಿಗೂ ಸಂಬಂಧವಿದೆಯಾ? ಇವರು ಅಚಾನಕ್ಕಾಗಿ ಒಂದೇ ಕಾರಿನಲ್ಲಿ ಪ್ರಯಾಣ ಮಾಡುತ್ತಾರಾ? ಅಥವಾ ಅದೆಲ್ಲವೂ ಪ್ರಿ ಪ್ಲ್ಯಾನ್​​ ಆಗಿರುತ್ತಾ? ಆ ಕೊಲೆಗಾರ ಯಾರು? ಕೊಲೆಗಳಿಗೆ ಕಾರಣವೇನು? ಹೀಗೆ ಸಿನಿಮಾ ಸಾಗಿದಂತೆ ಒಂದೊಂದೇ ವಿಷಯ ಬಹಿರಂಗವಾಗತೊಡಗುತ್ತದೆ.

ಕಿರಣ್​ ಸೂರ್ಯ ಒಂದೊಳ್ಳೆ ಸಸ್ಪೆನ್ಸ್​ ಥ್ರಿಲ್ಲರ್​ ಕಥೆಯನ್ನು ಕಟ್ಟಿಕೊಡುವಲ್ಲಿ ಸಕ್ಸಸ್​ ಆಗಿದ್ದಾರೆ. ಕೆಲವು ಕೆಲವೆಡೆ ಚಿತ್ರಕಥೆ ಸಡಿಲ ಎನಿಸಿದರೂ, ಪ್ರಿ&ಕ್ಲೆಮ್ಯಾಕ್ಸ್​ವರೆಗೂ ಕೊಲೆಗಾರ ಯಾರು ಎಂಬುದನ್ನು ಬಿಟ್ಟುಕೊಡದೇ ಬುದ್ಧಿವಂತಿಕೆ ತೋರಿದ್ದಾರೆ. ಕೆಲವೆಡೆ ಡಬಲ್​ ಮೀನಿಂಗ್​ ಸಂಭಾಷಣೆ ಕಸಿವಿಸಿ ಅನ್ನಿಸಿದರೂ, ಕೆಲವೆಡೆ ಅರ್ಥಪೂರ್ಣ ಡೈಲಾಗ್ಸ್​ ಇಷ್ಟವಾಗುತ್ತವೆ. ಹಿನ್ನೆಲೆ ಸಂಗೀತ ಚಿತ್ರವನ್ನು ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ. ಪ್ರಣವ್​ ಸಂಗೀತದಲ್ಲಿ "ನೀನಿರು ಸಾಕು ನನ್ನ ಜತೆ' ಇಂಪಾಗಿದೆ. ಕಿಚ್ಚ ಸುದೀಪ್​ ಅವರೂ ಹಾಡೊಂದಕ್ಕೆ ಧ್ವನಿಯಾಗಿರುವುದು ಸರ್​ಪ್ರೈಸ್​​ ಎಲಿಮೆಂಟ್​.

ಅಭಿಮನ್ಯು ಕಾಶೀನಾಥ್​ ಬರೋಬ್ಬರಿ 12 ವರ್ಷಗಳ ನಂತರ ಕಮ್​ಬ್ಯಾಕ್​ ಮಾಡಿರುವ ಕಾರಣ "ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರದ ಬಗ್ಗೆ ಕುತೂಹಲವಿತ್ತು. ಅದಕ್ಕೆ ತಕ್ಕಂತೆ ಅಭಿಮನ್ಯು ವಿಭಿನ್ನ ಶೇಡ್​ಗಳಿರುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಯಕಿ ಸ್ಪೂರ್ತಿ, ಸವಾಲಿನ ಪಾತ್ರದಲ್ಲಿ ಮಿಂಚಿದ್ದಾರೆ. ವಿಜಯಶ್ರೀ ಗ್ಲಾಮರ್​ ಗೊಂಬೆಯಾದರೆ, ಬಲರಾಜವಾಡಿ, ಶೋಭನ್​, ಪ್ರದಿಪ್​, ಅಯಾಂಕ್​ ಗಮನ ಸೆಳೆಯುತ್ತಾರೆ. "ಎಲ್ಲಿಗೆ ಪಯಣ ಯಾವುದೋ ದಾರಿ' ಗಂಭೀರ ವಿಷಯಗಳ ಬಗ್ಗೆ ಗಮನ ಸೆಳೆಯುವ ಒಂದೊಳ್ಳೆ ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರವಾಗಿದ್ದು, ಒಮ್ಮೆ ನೋಡಲಡ್ಡಿಯಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net