

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕುಟುಂಬದಲ್ಲಿ ಮತ್ತೊಮ್ಮೆ ಸಂಭ್ರಮ ಮನೆ ಮಾಡಿದೆ. ಅವರ ಮನೆಗೆ ಇನ್ನೊಂದು ಮಗುವಿನ ಆಗಮನವಾಗಿದೆ.
ನಟ ಯಶ್ ತಂಗಿ ನಂದಿನಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನು ತಮ್ಮ ಇನ್ಸ್ಟಾಗ್ರಾಂ ಮೂಲಕ ಅವರು ಹಂಚಿಕೊಂಡಿದ್ದಾರೆ. ಮೊದಲ ಮಗನ ಹೆಸರು ಚಿರಾಗ್. ಈ ಬಾರಿಯೂ ಕೂಡ ಗಂಡು ಮಗುವೇ ಹುಟ್ಟಿದೆ ಎಂದು ನಂದಿನಿ, ಪಾಪುವಿನ ಕಾಲಿನ ಒಂದು ಸಣ್ಣ ವಿಡಿಯೋ ಹಾಕಿ ಶೇರ್ ಮಾಡಿಕೊಂಡಿದ್ದಾರೆ.
2018ರ ಡಿಸೆಂಬರ್ನಲ್ಲಿ ಯಶ್-ರಾಧಿಕಾ ತಾರಾ ದಂಪತಿಯ ಮೊದಲ ಹೆಣ್ಣುಮಗುವಿನ ಜನನವಾಗಿತ್ತು. ಒಂದು ವರ್ಷದ ಒಳಗೇ ಅಂದರೆ 2019ರ ಅಕ್ಟೋಬರ್ನಲ್ಲಿ ಯಶ್ ಗಂಡುಮಗುವಿನ ಅಪ್ಪನಾಗಿದ್ದರು.
ನಂದಿನಿ ಮತ್ತು ಯಶ್ ನಡುವೆ ಉತ್ತಮ ಬಾಂಧವ್ಯ ಇದೆ. ಆಯ್ರಾ ಹುಟ್ಟಿದಾಗ ಅವಳ ಮುದ್ದಾದ ಫೋಟೋವನ್ನು ಶೇರ್ ಮಾಡಿದ್ದ ನಂದಿನಿ, ನಮ್ಮ ಮನೆಗೆ ಸಂತೋಷಗಳ ಗುಚ್ಛವೇ ಆಗಮಿಸಿದೆ. ನಾನೀಗ ಹೆಮ್ಮೆಯ ಅತ್ತೆ ಎಂದು ಖುಷಿಯಿಂದ ಕ್ಯಾಪ್ಷನ್ ಬರೆದಿದ್ದರು. ಅಲ್ಲದೆ, ರಿಯಾಲಿಟಿ ಶೋ ಒಂದರಲ್ಲಿ ತಮ್ಮ ಮತ್ತು ಅಣ್ಣ ಯಶ್ ನಡುವಿನ ಬಾಂಧವ್ಯದ ಬಗ್ಗೆ ಹೇಳಿಕೊಂಡಿದ್ದರು.
ನಂದಿನಿ ಅವರಿಗೆ ಮದುವೆಯಾಗಿ ಎಂಟು ವರ್ಷಗಳು ಕಳೆದಿದ್ದು, ಏಪ್ರಿಲ್ನಲ್ಲಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. (ಏಜೆನ್ಸೀಸ್)