ಬಹದ್ದೂರ್ ಗಂಡಿಗೆ ಯಶಾ ನಾಯಕಿ; ಬೆಳ್ಳಿತೆರೆಗೆ ಬಂದ ‘ಕನ್ನಡತಿ’ ಕಿರಣ್

Yasha
Published on

ಬೆಂಗಳೂರು: ಯಶಾ ಶಿವಕುಮಾರ್ ಹೆಸರು ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಕೇಳಿಬರುತ್ತಿದೆ. ಇದುವರೆಗೂ ಯಶಾ ಅಭಿನಯದ ಒಂದೇ ಒಂದು ಚಿತ್ರ ಬಿಡುಗಡೆಯಾಗಿಲ್ಲ, ಆಗಲೇ ಮೂರು ಚಿತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಈ ಮೂರರ ಜತೆಗೆ ಇನ್ನೊಂದು ಹೊಸ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ.

ಕಿರಣ್ ರಾಜ್ ಗೊತ್ತಲ್ಲ? ಅದೇ ‘ಕನ್ನಡತಿ’ ಖ್ಯಾತಿಯ ನಟ ಕಿರಣ್, ಈಗ ‘ಬಹದ್ದೂರ್ ಗಂಡು’ ಎಂಬ ಚಿತ್ರದ ಮೂಲಕ ಹೀರೋ ಆಗುವುದಕ್ಕೆ ಹೊರಟಿದ್ದಾರೆ. ಈ ಚಿತ್ರಕ್ಕೆ ಯಶಾ ಶಿವಕುಮಾರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ‘ರತ್ನಮಂಜರಿ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದ ಪ್ರಸಿದ್ಧ್, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮಾರ್ಚ್​ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

ಇದುವರೆಗಿನ ಚಿತ್ರಗಳಲ್ಲಿ ಪೇಟೆಯ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಯಶಾ, ಇದರಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಹಳ್ಳಿ ಗೌಡರ ಮಗಳ ಪಾತ್ರ ಮಾಡುತಿದ್ದೇನೆ. ವಿಭಿನ್ನವಾದ ಪಾತ್ರವಿದೆ. ನನ್ನ ಪಾತ್ರದಲ್ಲೊಂದು ಟ್ವಿಸ್ಟ್ ಸಹ ಇದೆ. ನನ್ನ ಪಾತ್ರ ಮತ್ತು ಕಥೆ ಇಷ್ಟವಾಗಿದ್ದರಿಂದಲೇ ಈ ಚಿತ್ರವನ್ನು ಒಪ್ಪಿಕೊಂಡೆ’ ಎನ್ನುತ್ತಾರೆ ಯಶಾ.

ಬೆಂಗಳೂರಿನ ಯಶಾ ಇತ್ತೀಚೆಗಷ್ಟೇ ಇಂಜಿನಿಯರಿಂಗ್ ಮುಗಿಸಿದ್ದಾರೆ. ಓದುವಾಗಲೇ ಮಾಡಲಿಂಗ್ ಮಾಡುತ್ತಿದ್ದ ಅವರು, ‘ಮಿಸ್ ಕರ್ನಾಟಕ ಇಂಟರ್​ನ್ಯಾಷನಲ್’, ‘ಮಿಸ್ ಬೆಂಗಳೂರು’ ಮತ್ತು ‘ಮಿಸ್ ಗ್ಲೋರಿ ಆಫ್ ಗ್ಯಾಲಾಕ್ಸಿ’ಯಾಗಿ ಗಮನಸೆಳೆದಿದ್ದಾರೆ. ಈ ಮಧ್ಯೆ, ‘ರಾಜ್ ಸೌಂಡ್ಸ್ ಆಂಡ್ ಲೈಟ್ಸ್’ ಎಂಬ ಕನ್ನಡ ಮತ್ತು ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು, ಅದು ಮುಗಿಯುವುದಕ್ಕಿಂತ ಮುಂಚೆಯೇ ಯೋಗರಾಜ್ ಭಟ್ ಸಹನಿರ್ವಣದ ‘ಪದವಿಪೂರ್ವ’ ಮತ್ತು ಶಿವರಾಜಕುಮಾರ್ ಅಭಿನಯದ ‘ಶಿವಪ್ಪ’ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಮೂರೂ ಚಿತ್ರಗಳ ಬಿಡುಗಡೆಗೆ ಮುನ್ನವೇ ಅವರಿಗೆ ‘ಬಹದ್ದೂರ್ ಗಂಡು’ ಸಿನಿಮಾ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net