ಯಶ್​ ಸರಳ ಹುಟ್ಟುಹಬ್ಬ

photo_2022-01-09_00-45-33
Published on

ಬೆಂಗಳೂರು: ಮಡದಿ ರಾಧಿಕಾ ಪಂಡಿತ್ ಮತ್ತು ಮುದ್ದಿನ ಇಬ್ಬರು ಮಕ್ಕಳ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ನಟ ಯಶ್ ಸರಳವಾಗಿ 36ನೇ ಜನ್ಮದಿನವನ್ನು ಶನಿವಾರ ಆಚರಿಸಿಕೊಂಡಿದ್ದಾರೆ. ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಜನ್ಮದಿನ ಆಚರಣೆ ಕೈ ಬಿಟ್ಟಿದ್ದ ಯಶ್, ಈ ವರ್ಷವೂ ಅದನ್ನು ಮುಂದುವರಿಸಿ, ಅಭಿಮಾನಿಗಳಿಗೆ ತಾವಿದ್ದಲ್ಲಿಂದಲೇ ಹರಿಸಿದರೆ ಸಾಕು ಎಂದು ಮನವಿ ಮಾಡಿದ್ದರು. ಅದರಂತೆ ಸೋಶಿಯಲ್ ಮೀಡಿಯಾದಲ್ಲಿ ಯಶ್ ಆಪ್ತರು, ಅಭಿಮಾನಿಗಳು ಮತ್ತು ಹಿತೈಷಿಗಳು ಅವರೊಂದಿಗಿನ ಫೋಟೋ ಶೇರ್ ಮಾಡಿ ಶುಭ ಕೋರಿದರೆ, ಅಭಿಮಾನಿ ವಲಯದಲ್ಲಿ ಸಿಡಿಪಿ ಬಿಡುಗಡೆ ಮಾಡಿ ನೆಚ್ಚಿನ ನಟನಿಗೆ ಶುಭಾಶಯ ರವಾನಿಸಿದ್ದಾರೆ.

ಟ್ವೀಟ್ ಮೂಲಕ ಧನ್ಯವಾದ: ತಮಗೆ ಶುಭ ಹಾರೈಸಿದ ಎಲ್ಲರಿಗೂ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿರುವ ಯಶ್, ‘ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ ನನಗೆ ಅಷ್ಟೇನೂ ಒಲವಿಲ್ಲ. ನನ್ನ ಸುತ್ತಮುತ್ತಲಿನವರು, ಅದರಲ್ಲೂ ಮಕ್ಕಳು ಸಂಭ್ರಮಿಸಿದಾಗ ನನಗೂ ಉತ್ಸಾಹ ಬರುತ್ತದೆ. ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದಗಳು. ಎಲ್ಲರೂ ಸುರಕ್ಷಿತವಾಗಿರಿ’ ಎಂದು ಹೇಳಿದ್ದಾರೆ.

ಕೆಜಿಎಫ್ ಚಾಪ್ಟರ್-2 ಪೋಸ್ಟರ್: ಅಭಿಮಾನಿಗಳಿಗೆ ಬರ್ತ್ ಡೇಗೆ ಉಡುಗೊರೆ ರೂಪದಲ್ಲಿ ‘ಕೆಜಿಎಫ್ ಚಾಪ್ಟರ್ 2’ ಕುರಿತಾದ ಹೊಸ ಅಪ್ ಡೇಟ್ ಸಿಗಲಿದೆ ಎಂದೇ ಹೇಳಲಾಗಿತ್ತು. ಅದರಂತೆ ಶನಿವಾರ ಬೆಳಗ್ಗೆ 9ಕ್ಕೆ ಚಿತ್ರದ ಹೊಸ ಲುಕ್ ಬಿಡುಗಡೆ ಮಾಡಿ ಶುಭಾಶಯ ತಿಳಿಸಿದೆ ಹೊಂಬಾಳೆ ಫಿಲಂಸ್. ಕೇವಲ ಅಷ್ಟೇ ಅಲ್ಲ ಬಿಡುಗಡೆ ದಿನಾಂಕದ ಬಗ್ಗೆ ಇದ್ದ ಗೊಂದಲಕ್ಕೂ ಉತ್ತರ ನೀಡಿದೆ. ಇತ್ತೀಚಿನ ಕೆಲ ಬೆಳವಣಿಗೆಗಳನ್ನು ನೋಡುವುದಾದರೆ, ಏ. 14ರಂದು ‘ಕೆಜಿಎಫ್’ ಸಿನಿಮಾ ರಿಲೀಸ್ ಆಗಲಿದೆಯೇ ಎಂಬ ಅನುಮಾನ ಎಲ್ಲರಲ್ಲಿಯೂ ಇತ್ತು. ಇದೀಗ ಅದು ಬಗೆಹರಿದಿದ್ದು, ಅದೇ ದಿನವೇ ಚಿತ್ರ ತೆರೆಗೆ ಬರಲಿದೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ ಚಿತ್ರತಂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net