

ಬೆಂಗಳೂರು: ‘ಭಾರತೀಯ ಚಿತ್ರರಂಗದಲ್ಲಿ ಕ್ರೋಮೋರೆನ್‌ಗಳ ಕುರಿತು ಇದುವರೆಗೆ ಯಾವ ಸಿನಿಮಾ ಬಂದಿಲ್ಲ. ಹೀಗಾಗಿ, ಈ ವಿಷಯವಾಗಿ ಸಿನಿಮಾ ಮಾಡುತ್ತಿರುವುದು ಮೊದಲು ನಾವೇ.’ ಎನ್ನುತ್ತಾರೆ ಇದೇ ತಿಂಗಳ 26ರಂದು ತೆರೆಗೆ ಬರಲು ಸಿದ್ಧವಿರುವ ‘ಎಕ್ಸ್ ಆ್ಯಂಡ್ ವೈ’ ಚಿತ್ರದ ನಾಯಕ, ನಿರ್ದೇಶಕ ಸತ್ಯಪ್ರಕಾಶ್. ‘ರಾಮಾ ರಾಮಾ ರೇ’, ‘ಒಂದಲ್ಲಾ ಎರಡಲ್ಲಾ’ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಟಿಸಿ, ಆ್ಯಕ್ಷನ್-ಕಟ್ ಹೇಳಿರುವ ಚಿತ್ರವಿದು. ಈಗಾಗಲೇ ಟ್ರೇಲರ್ ಹಾಗೂ ಸಾಂಗ್ ಮೂಲಕ ಸದ್ದು ಮಾಡಿರುವ ಚಿತ್ರತಂಡ ಬಿಡುಗಡೆಯ ಖುಷಿಯಲ್ಲಿ ಇದೀಗ ಎರಡನೇ ಸಾಂಗ್ ರಿಲೀಸ್ ಮಾಡಿದೆ. ‘ಗೋ ವಿನ್ ದ ಸ್ವಾಮಿ’ ಎಂಬ ಶೀರ್ಷಿಕೆಯ ಈ ಗೀತೆಯನ್ನು ವಿ.ಮನೋಹರ್ ರಚಿಸಿದ್ದು, ಕೌಶಿಕ್ ಹರ್ಷ ಸಂಗೀತ ನೀಡಿದ್ದಾರೆ. ಗಾಯಕ ಹೇಮಂತ್ ಧ್ವನಿಯಲ್ಲಿ ಮೂಡಿಬಂದಿದೆ. ಆಟೋ ಡ್ರೈವರ್‌ಗಳಿಗೆ ಈ ಗೀತೆಯನ್ನು ಅರ್ಪಿಸಿರುವುದು ವಿಶೇಷ. ಸತ್ಯಪ್ರಕಾಶ್, ‘ವಿಭಿನ್ನ ಕಥಾ ಹಂದರದ ಈ ಚಿತ್ರವು ನನ್ನ ನಾಲ್ಕನೇ ಪ್ರಯತ್ನ. ಹಾಗೆಯೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದೇನೆ. ನಾನಿಲ್ಲಿ ಚೆನ್ನಾಗಿ ನಟಿಸಿದ್ದೇನೆಂದರೆ ಅದಕ್ಕೆ ತಂಡದಲ್ಲಿರುವ ಅನುಭವಿ ಕಲಾವಿದರೇ ಕಾರಣ. ಅವರನ್ನೆಲ್ಲಾ ನೋಡಿ ಕಲಿತಿದ್ದೇನೆ. ಹಾಗೆಯೇ ಕ್ರೋಮೋರೆನ್‌ಗಳ ಬಗ್ಗೆ ಇದೆ ಎಂದ ಮಾತ್ರಕ್ಕೆ ಸೈನ್ಸ್ ಫಿಕ್ಷನ್ ಅಲ್ಲ, ನ್ ರೈಡ್ ಜತೆಗೆ ಸಿಂಪಲ್ ಕಥೆ’ ಎಂದು ಮಾಹಿತಿ ನೀಡಿದರು. ವಿ.ಮನೋಹರ್, ‘ಸತ್ಯ ನಿರ್ದೇಶಕನಾಗಿಯೇ ಹೀರೋ ಆಗಿದ್ದವರು. ಇದೀಗ, ಬಣ್ಣ ಹಚ್ಚುವ ಮೂಲಕ ಹೀರೋ ಆಗುತ್ತಿದ್ದಾರೆ. ಇದೊಂದು ಹೊಸ ಯೋಚನೆಯ ಕಥೆ’ ಎಂದರು. ಸತ್ಯಪ್ರಕಾಶ್ ಜತೆಗೆ ಅಥರ್ವ, ಬೃಂದಾ ಆಚಾರ್ಯ, ಅಯಾನಾ, ಹರಿಣಿ, ಸುಂದರ್ ವೀಣಾ, ಧರ್ಮಣ್ಣ ಕಡೂರು ಕಲಾಬಳಗದಲ್ಲಿದ್ದಾರೆ. ಆ್ಯಂಬೋ ಆಟೋ ವಿಶೇಷ ಪಾತ್ರದಲ್ಲಿರುವುದು ಮತ್ತೊಂದು ವಿಶೇಷತೆ.