ಸ್ಯಾಂಡಲ್‌ವುಡ್‌ನಲ್ಲಿ ಡಬ್ಲ್ಯುಡಬ್ಲ್ಯುಇ ಸ್ಟಾರ್: ‘666 ಆಪರೇಷನ್ ಡ್ರೀಮ್ ಥಿಯೇಟರ್’ನಲ್ಲಿ ಸುಖ್ವಿಂದರ್ ಸಿಂಗ್ ಗ್ರೆವಾಲ್

sukhi singh
Published on

ಬೆಂಗಳೂರು: ‘ಸಪ್ತ ಸಾಗರದಾಚೆ ಎಲ್ಲೋ’ ಸರಣಿ ಬಳಿಕ ಹೇಮಂತ್ ರಾವ್ ನಿರ್ದೇಶಿಸುತ್ತಿರುವ ಚಿತ್ರ ‘666 ಆಪರೇಷನ್ ಡ್ರೀಮ್ ಥಿಯೇಟರ್’. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಬೃಹತ್ ಸೆಟ್‌ಗಳನ್ನು ನಿರ್ಮಿಸಿ ಚಿತ್ರದ ಶೂಟಿಂಗ್ ನಡೆಸಲಾಗುತ್ತಿದೆ. ಇತ್ತೀಚೆಗೆ ನಟ ಸುದೀಪ್ ಶೂಟಿಂಗ್ ಸೆಟ್‌ಗೆ ಭೇಟಿ ನೀಡಿ, ತಂಡಕ್ಕೆ ಶುಭ ಕೋರಿದ್ದರು. ಈ ಚಿತ್ರಕ್ಕೆ ಇದೀಗ ಡಬ್ಲ್ಯುಡಬ್ಲ್ಯುಇ ಸೂಪರ್‌ಸ್ಟಾರ್ ಸುಖ್ವಿಂದರ್ ಸಿಂಗ್ ಗ್ರೆವಾಲ್ ಸೇರಿಕೊಂಡಿದ್ದಾರೆ. ಇತ್ತೀಚೆಗೆ ಅವರು ಶೂಟಿಂಗ್‌ನಲ್ಲೂ ಭಾಗಿಯಾಗಿದ್ದಾರೆ. ಈಗಾಗಲೇ ಹಿಂದಿಯ ಶಾರುಖ್ ಖಾನ್ ಅಭಿನಯದ ‘ಜವಾನ್’, ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ಶಾರುಖ್ ಪುತ್ರ ಆರ್ಯನ್ ನಿರ್ದೇಶನದ ‘ಬ್ಯಾ...ಡ್ಸ್ ಆ್ ಬಾಲಿವುಡ್’ ಸರಣಿಯಲ್ಲಿ ನಟಿಸಿರುವ ಸುಖ್ವಿಂದರ್, ‘666 ಆಪರೇಷನ್....’ ಮೂಲಕ ಇದೀಗ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಅವರ ಬಗ್ಗೆ ಹೇಮಂತ್, ‘ನಮಗೆ ಭಯಾನಕವಾಗಿ ಕಾಣುವ ವ್ಯಕ್ತಿತ್ವದ ಪಾತ್ರಧಾರಿ ಬೇಕಿತ್ತು. ಸುಖಿ ಈ ಪಾತ್ರಕ್ಕೆ ಸರಿ ಹೊಂದುತ್ತಾರೆ. ನಾನು ಸೆಟ್‌ನಲ್ಲಿ ಭೇಟಿಯಾದ ಅತ್ಯಂತ ಸೌಮ್ಯ ವ್ಯಕ್ತಿಗಳಲ್ಲಿ ಅವರು ಒಬ್ಬರು. ಅವರ ಹೈಟ್‌ಗೆ ಸರಿಹೊಂದಿಸಲು ನಾವು ಸೆಟ್ ಎತ್ತರವನ್ನೇ ಹೆಚ್ಚಿಸಬೇಕಾಯಿತು’ ಎಂದು ಮಾಹಿತಿ ನೀಡಿದರು.

7 ಅಡಿ ದೈತ್ಯ ಸುಖಿ: ಬರೋಬ್ಬರಿ 7 ಅಡಿ 2 ಇಂಚು ಎತ್ತರವಿರುವ ಆಜಾನುಬಾಹು ಸುಖ್ವಿಂದರ್ ಸಿಂಗ್ ಗ್ರೆವಾಲ್ ಮೂಲತಃ ಪಂಜಾಬಿನವರು. ಭಾರತದ ಹೆಸರಾಂತ ಕುಸ್ತಿಪಟು ದ ಗ್ರೇಟ್ ಖಲಿ ಗರಡಿಯಲ್ಲಿ ಪಳಗಿರುವ ಸುಖಿ, ಡಬ್ಲೂಡಬ್ಲೂಇನಲ್ಲಿ ‘ಜೇಂಟ್ ಜಂಜೀರ್’ ಎಂದೇ ಪ್ರಸಿದ್ಧಿಯಾಗಿದ್ದಾರೆ. ಈ ಹಿಂದೆ ತಮಿಳಿನ ‘ಸುಲ್ತಾನ್’, ‘ವಿಶ್ವಾಸಂ’, ತೆಲುಗಿನ ‘ಭೋಲಾ ಶಂಕರ್’, ಹಿಂದಿಯ ‘ಜವಾನ್’, ‘ಛಾವಾ’ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಕನ್ನಡಕ್ಕೆ ಎಂಟ್ರಿ ಕೊಟ್ಟಿರುವ ಅವರು, ‘ಕನ್ನಡ ಚಿತ್ರರಂಗದ ಭಾಗವಾಗಿರುವುದು ಖುಷಿ ನೀಡಿದೆ. ಶಿವರಾಜಕುಮಾರ್ ಸಿನಿಮಾದಲ್ಲಿ ಕೆಲಸ ಮಾಡುವುದು ಒಂದು ಗೌರವ. ತೆರೆಯ ಮೇಲೆ ನನ್ನ ನಟನೆ ನೋಡಿ ಕನ್ನಡ ಪ್ರೇಕ್ಷಕರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ನನಗೂ ಇದೆ. ಬೆಂಗಳೂರಿನ ವಾತಾವರಣ ತುಂಬಾ ಇಷ್ಟವಾಗುತ್ತಿದೆ’ ಎಂದು ಖುಷಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net