

ಬೆಂಗಳೂರು: ಮಾರ್ಚ್ನಿಂದ 'ಕಾಂತಾರ 2' ಚಿತ್ರದ ಬರವಣಿಗೆ ಕೆಲಸವನ್ನು ಶುರು ಮಾಡುವುದಾಗಿ ರಿಷಭ್ ಶೆಟ್ಟಿ ಹೇಳಿದ್ದರು. ಅದರಂತೆ ಇಂದಿನಿಂದ ಬರವಣಿಗೆ ಕೆಲಸಕ್ಕೆ ಓಂಕಾರ ಹಾಕಿದ್ದಾರೆ.
ಇಂದಿನಿಂದ 'ಕಾಂತಾರ 2' ಚಿತ್ರದ ಬರವಣಿಗೆ ಕೆಲಸ ಪ್ರಾರಂಭವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ರಿಷಭ್ ಶೆಟ್ಟಿ, ಚಿತ್ರದ ಕೆಲಸಗಳನ್ನು ಶುರು ಮಾಡಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಮುಂದಿನ ಕೆಲವು ತಿಂಗಳುಗಳ ಕಾಲ ಬರವಣಿಗೆ ಕೆಲಸ ಮುಂದುವರೆಯಲಿದ್ದು, ಆ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ.
ಅಣ್ಣಪ್ಪ ಪಂಜುರ್ಲಿ ಕೋಲಕ್ಕೆ ರಿಷಭ್ ಶೆಟ್ಟಿ ಮತ್ತು ತಂಡದವರು ಪ್ರಾರ್ಥನೆ ಸಲ್ಲಿಸುವುದಕ್ಕೆ ಹೋದ ಸಂದರ್ಭದಲ್ಲಿ, 'ಕಾಂತಾರ 2' ಚಿತ್ರಕ್ಕೆ ಅನುಮತಿ ಕೇಳಿದ್ದರು ಮತ್ತು ಅವರಿಗೆ ದೈವದಿಂದ ಅಭಯ ಸಿಕ್ಕಿತ್ತು ಎಂದು ಹೇಳಲಾಗಿತ್ತು.
ಆ ನಂತರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ''ಕಾಂತಾರ' ಚಿತ್ರಕ್ಕೆ ಸಿಕ್ಕ ಯಶಸ್ಸು ಮತ್ತು ಪ್ರೋತ್ಸಾಹ, 'ಕಾಂತಾರ 2' ಮಾಡಲು ಪ್ರೇರೇಪಿಸಿದೆ. ಅದು "ಕಾಂತಾರ'ದ ಮುಂದುವರೆದ ಭಾಗವೂ ಇರಬಹುದು ಅಥವಾ ಆ ಕಥೆಗಿಂತ ಹಿಂದಿನ ಕಥೆಯೂ ಇರಬಹುದು. ರಿಷಭ್ ಜತೆಗೆ ಕೂತು ಚರ್ಚೆ ನಡೆಸಿ, ಮುಂದಿನ ಕೆಲವು ತಿಂಗಳಲ್ಲಿ ಅಧಿಕೃತವಾಗಿ ಘೋಷಿಸುತ್ತೇವೆ. 'ಕಾಂತಾರ 2' ಚಿತ್ರ ಆಗುತ್ತಿರುವುದು ಹೌದು. ಆದರೆ, ಇಂಥದ್ದೇ ಸಮಯದಲ್ಲಿ ಬರಲಿದೆ ಎಂದು ಹೇಳುವುದು ಕಷ್ಟ. ನಾವು ಯಾವುದೇ ಟೈಮ್ಲೈನ್ ಹಾಕಿಕೊಂಡಿಲ್ಲ. ಚಿತ್ರ ಯಾವಾಗ ಬೇಕಾದರೂ ಬರಬಹುದು' ಎಂದು ಹೇಳಿದ್ದರು.
ಅದರಂತೆ, ಈಗ 'ಕಾಂತಾರ 2' ಚಿತ್ರದ ಕೆಲಸಗಳು ಯುಗಾದಿ ಹಬ್ಬದ ಪ್ರಯುಕ್ತ ಇಂದು ಅಧಿಕೃತವಾಗಿ ಪ್ರಾರಂಭವಾಗಿದೆ. ಮುಂದಿನ ಕೆಲವು ತಿಂಗಳ ಕಾಲ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯಲಿದ್ದು, ಆ ನಂತರ ಚಿತ್ರೀಕರಣ ಶುರುವಾಗಲಿದೆ. ಮೊದಲ ಚಿತ್ರದಲ್ಲಿ ನಟಿಸಿದವರು ಇಲ್ಲಿ ಯಾರೆಲ್ಲಾ ಇರುತ್ತಾರೆ? ಮತ್ತು ಹೊಸದಾಗಿ ಯಾರು ಸೇರ್ಪಡೆಯಾಗಲಿದ್ದಾರೆ? ಎಂಬ ವಿಷಯ ಇನ್ನಷ್ಟೇ ಹೊರಬೀಳಬೇಕಿದೆ. ಈ ಚಿತ್ರವನ್ನು 'ಕಾಂತಾರ' ನಿರ್ಮಿಸಿದ್ದ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದಾರೆ.