

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಮಿಂಚಿರುವ ನಿರ್ದೇಶಕರು ಬಾಲಿವುಡ್ ಸ್ಟಾರ್‌ಗಳಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಇದೇ ಮೊದಲಲ್ಲ. ಮಣಿರತ್ನಂ, ಎ.ಆರ್.ಮುರುಗದಾಸ್, ರಾಮ್‌ಗೋಪಾಲ್ ವರ್ಮ, ಪ್ರಭುದೇವ ಸೇರಿ ಇತ್ತೀಚಿನ ವಿಷ್ಣುವರ್ಧನ್, ಆಟ್ಲಿ, ಸಂದೀಪ್ ರೆಡ್ಡಿ ವಂಗಾ, ಗೌತಮ್ ತಿನ್ನೂರಿ ಬಾಲಿವುಡ್ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು. ಈ ಸಾಲಿಗೆ ಹೊಸ ಸೇರ್ಪಡೆ ಲೋಕೇಶ್ ಕನಗರಾಜ್. ‘ಅವಿಯಾಲ್’, ‘ಕೈತಿ’, ‘ವಿಕ್ರಮ್’, ‘ಲಿಯೋ’ ನಿದೇಶಿಸಿರುವ ಲೋಕೇಶ್, ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಇಬ್ಬರು ಮೊದಲ ಹಂತದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಲಿದ್ದು, ಮೈತ್ರಿ ಮೂವೀಸ್ ಬ್ಯಾನರಡಿಯಲ್ಲಿ ನಿರ್ಮಾಣವಾಗಲಿದೆ. ‘ಲಾಲ್ ಸಿಂಗ್ ಛಡ್ಡಾ’ ಬಳಿಕ ಆಮಿರ್ ಸದ್ಯ ‘ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ಬಿಜಿಯಿದ್ದಾರೆ. ಇದಲ್ಲದೇ ಮುಂದಿನ 18 ತಿಂಗಳಲ್ಲಿ ಅಮಿರ್ ಖಾನ್ ನಿರ್ಮಾಣದ ನಾಲ್ಕು ಸಿನಿಮಾಗಳು ತೆರೆಗೆ ಬರಲಿವೆ. ಇದರ ಬಳಿಕ ಲೋಕೇಶ್ ಕನಗರಾಜ್‌ಗೆ ಡೇಟ್ಸ್ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಮೈತ್ರಿ ಸಂಸ್ಥೆ ನಿರ್ಮಾಣ ಸಂಸ್ಥೆಯ ಈ ಸುದ್ದಿಯನ್ನು ಅಲ್ಲಗಳೆದಿದ್ದು, ‘ಖ್ಯಾತ ನಟ ಆಮಿರ್‌ಖಾನ್‌ನೊಂದಿಗೆ ಕೆಲಸ ಮಾಡಲು ಸಂಸ್ಥೆಯು ಉತ್ಸುಕವಾಗಿದೆ. ಆದರೆ, ಸದ್ಯ ಹರಿದಾಡುತ್ತಿರುವ ಸುದ್ದಿ ಕೇವಲ ನಿಜವಲ್ಲ. ಆಮಿರ್‌ನೊಂದಿಗೆ ಯಾವುದೇ ಮಾತುಕತೆ ಆಗಿಲ್ಲ’ ಎಂದಿದೆ. ಲೋಕೇಶ್ ಸದ್ಯ ರಜಿನಿಕಾಂತ್ ಅಭಿನಯದ ‘ಕೂಲಿ’ ಸಿನಿಮಾದಲ್ಲಿ ಬಿಜಿಯಿದ್ದಾರೆ. -ಏಜೆನ್ಸೀಸ್