ಬಾಲಿವುಡ್​ನಲ್ಲಿ ಕಡಿಮೆ ಚಿತ್ರಗಳೇಕೆ?; ಕೊನೆಗೂ ಮನಸ್ಸಿನ ಮಾತು ಬಿಚ್ಚಿಟ್ಟ ಪೂಜಾ

Pooja Hegde
Published on

ಕಳೆದ ಒಂದು ದಶಕದಿಂದ ಚಿತ್ರರಂಗದಲ್ಲಿದ್ದಾರೆ ಪೂಜಾ ಹೆಗ್ಡೆ. ತೆಲುಗು, ತಮಿಳಿನ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರಾದರೂ, ಬಾಲಿವುಡ್​ನಲ್ಲಿ ನಟಿಸಿದ್ದು ಕಡಿಮೆಯೇ. ಮೊದಲ ಚಿತ್ರ 2016ರಲ್ಲಿ ಬಿಡುಗಡೆಯಾದರೆ, ಎರಡನೆಯದು 2019ರಲ್ಲಿ ಬಿಡುಗಡೆಯಾಗಿದೆ. ಮೂರನೆಯ ಚಿತ್ರವನ್ನು ಅವರು ಈಗಾಗಲೇ ಒಪ್ಪಿದ್ದು, ಅದು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಬಾಲಿವುಡ್​ನಲ್ಲಿ ನಟಿಸಿದ ಚಿತ್ರಗಳೇಕೆ ಅಷ್ಟು ಕಡಿಮೆ ಎಂಬ ಪ್ರಶ್ನೆ ಸಹಜವೇ. ಇದನ್ನು ಅವರೆದುರು ಇಟ್ಟರೆ, ಒಳ್ಳೆಯ ಅವಕಾಶಗಳ ಕೊರತೆಯೇ ನಿಜವಾದ ಕಾರಣ ಎಂದಿದ್ದಾರೆ.

‘ರಾಧೇ ಶ್ಯಾಮ್ ಚಿತ್ರದ ಪ್ರಚಾರದ ವೇಳೆ ಮಾತನಾಡಿರುವ ಅವರು, ‘ನನಗೆ ಒಳ್ಳೆಯ ಅವಕಾಶಗಳು ಸಿಗಲೇ ಇಲ್ಲ. ನನಗೇನಾದರೂ ‘ರಾಝಿ’ ತರಹದ ಚಿತ್ರಗಳು ಸಿಕ್ಕಿದ್ದರೆ, ಖಂಡಿತಾ ಒಪ್ಪಿಕೊಳ್ಳುತ್ತಿದ್ದೆ. ಆದರೆ, ಅಂತಹ ಚಿತ್ರಗಳು ಸಿಗಲಿಲ್ಲ. ಬಾಲಿವುಡ್​ನಲ್ಲಿ ಒಳ್ಳೆಯ ಚಿತ್ರಗಳನ್ನು ಮಾಡುತ್ತಿದ್ದಾರೆ. ಆದರೆ, ದಕ್ಷಿಣದಲ್ಲಿ ವಿಭಿನ್ನವಾಗಿ ಯೋಚನೆ ಮಾಡುತ್ತಿದ್ದಾರೆ. ಅವರಿಗೆ ಪ್ರೇಕ್ಷಕರಿಗೆ ಏನು ಬೇಕು ಎಂಬುದು ಗೊತ್ತಿದೆ. ಕಲಾವಿದರಿಗೂ ಜನ ತಮ್ಮಿಂದ ಏನು ನಿರೀಕ್ಷಿಸುತ್ತಿದ್ದಾರೆ ಎಂದು ಗೊತ್ತಿದೆ’ ಎನ್ನುತ್ತಾರೆ ಪೂಜಾ.

ಬಾಲಿವುಡ್​ನ ತಮ್ಮ ಮೊದಲ ಚಿತ್ರ ‘ಮೊಹೆಂಜೊ ದಾರೋ’ ನಿರೀಕ್ಷಿಸಿದಷ್ಟು ಗೆಲ್ಲಲಿಲ್ಲ ಎನ್ನುವ ಅವರು, ‘ಆ ಚಿತ್ರ ಪೇಪರ್ ಮೇಲೆ ಮಾತ್ರ ಚೆನ್ನಾಗಿತ್ತು. ಅದು ಸೋಲಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆ ಸೋಲು ನನ್ನನ್ನು ಇನ್ನಷ್ಟು ಕೆಲಸ ಮಾಡುವಂತೆ ಮಾಡಿತು. ಅದರಿಂದ ಹಿನ್ನೆಡೆ ಆಯಿತಾದರೂ ಸಾಕಷ್ಟು ಕಲಿಯುವಂತಾಯಿತು’ ಎನ್ನುತ್ತಾರೆ ಪೂಜಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net