ಈಗಲಾದರೂ ಮಾತನಾಡಬೇಕಲ್ಲವೇ..! ಕಮಲ್​ ಹಾಸನ್​ ಹೇಳಿಕೆಯನ್ನೇಕೆ ವಿರೋಧಿಸುತ್ತಿಲ್ಲ ಕನ್ನಡದ ಕಲಾವಿದರು?

AZXasc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಕನ್ನಡ ಬಂದಿದ್ದು ತಮಿಳಿನಿಂದ' ಎಂದು ತಮಿಳು ನಟ ಕಮಲ್​ ಹಾಸನ್​ ನೀಡಿರುವ ಹೇಳಿಕೆಗೂ ಕನ್ನಡಿಗರಿಗೂ ಸಂಬಂಧವಿಲ್ಲವೇ? ಹಾಗಿದ್ದರೆ ಕನ್ನಡದ ನಟ, ನಟಿಯರೇಕೆ ಈ ಬಗ್ಗೆ ಮೌನವಹಿಸಿದ್ದಾರೆ? ಯಾಕೆ ಯಾರೂ ಮಾತನಾಡುತ್ತಿಲ್ಲ? ಕಮಲ್​ ಕೂಡ ಚಿತ್ರರಂಗದವರು ಎಂಬ ಕಾರಣವೇ? ಅಥವಾ ಕನ್ನಡ ಭಾಷೆಯ ಮೇಲಿನ ಪ್ರೀತಿಗಿಂತ, ಆ ನಟನ ಮೇಲೇ ಹೆಚ್ಚು ಅಭಿಮಾನವೇ? ಅಥವಾ ಕಮಲ್​ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವ ಭಯವೇ? ಕಮಲ್​ಗೆ ತಮಿಳಿನ ಮೇಲಿರುವಷ್ಟು ಪ್ರೀತಿ, ಅಭಿಮಾನ, ಕನ್ನಡದ ತಾರೆಯರಿಗೆ ಕನ್ನಡದ ಮೇಲಿಲ್ಲವೇ? ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು, ತಂತ್ರಜ್ಞರು ಕಮಲ್​ ಹೇಳಿಕೆಯ ಬಗ್ಗೆ ಮೌನವಹಿಸಿರುವುದು ನಿಜಕ್ಕೂ ಆತಂಕ ಮೂಡಿಸುವಂತಿದೆ.

ಒಮ್ಮೆ ಮಾಡಿದರೆ ತಪ್ಪು, ಮತ್ತೊಮ್ಮೆ ಮಾಡಿದರೆ ಅಪರಾಧ

ಕಮಲ್​ ಹಾಸನ್​ ಬಹುಶಃ ಬಾಯಿತಪ್ಪಿ ಹಾಗೆ ಹೇಳಿಬರಹುದು ಅಂತಂದುಕೊಂಡರೆ, ಅದು ಖಂಡಿತ ಸುಳ್ಳು. ಏಕೆಂದರೆ ಅವರ ಹೇಳಿಕೆಯ ವಿರುದ್ಧ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಅವರಿಗೂ ಮಾಹಿತಿ ಇದೆ. ಬುಧವಾರ ಕೇರಳದ ತಿರುವನಂತಪುರದಲ್ಲಿ "ಥಗ್​ಲೈಫ್​' ಪ್ರಚಾರ ನಡೆಸಿದ ನಟ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. "ನಾನು ಶಿವಣ್ಣನಿಗೆ ಪ್ರೀತಿಯಿಂದ ಹೇಳಿದ ಮಾತನ್ನು ವಿರೋಧಿಸುತ್ತಿದ್ದಾರೆ. ಅವರ ತಂದೆ ನನ್ನ ಅಣ್ಣನಂತೆ. ನಾವು ಒಂದು ಕುಟುಂಬದಂತೆ. ಭಾಷೆಗಳೂ ಅಷ್ಟೇ. ಉತ್ತರ ಭಾರತದ ದೃಷ್ಟಿಯಲ್ಲಿ ನೋಡಿದರೆ ನಾನು ಹೇಳಿದ್ದು ನಿಜ. ದ್ರಾವಿಡ ಭಾಷೆಗಳು ಒಂದೇ ಮರದ ರೆಂಬೆಗಳು. ಆದರೆ, ಉತ್ತರ ಭಾರತೀಯರು ಅಲ್ಲಿನ ಭಾಷೆಗಳಿಗೂ, ದಣದ ಭಾಷೆಗಳಿಗೂ ಹೋಲಿಕೆಯಿದೆ ಎನ್ನುತ್ತಾರೆ. ಆದರೆ, ಕನ್ನಡ ದಣದ ಕುಟುಂಬಕ್ಕೆ ಸೇರುತ್ತಾ ಅಥವಾ ಉತ್ತರ ಭಾರತದ ಭಾಷೆಗಳ ಗುಂಪಿನಲ್ಲಿ ಸೇರುತ್ತಾ ಎಂಬುದನ್ನು ಕನ್ನಡಿಗರೇ ನಿರ್ಧರಿಸಬೇಕು. ಇದು ಪ್ರಜಾಪ್ರಭುತ್ವ ದೇಶ. ಇದು ನನ್ನ ಹೇಳಿಕೆಯನ್ನು ವಿರೋಧಿಸುತ್ತಿರುವವರಿಗೆ ನಾನು ನೀಡುತ್ತಿರುವ ಉತ್ತರವಲ್ಲ, ವಿವರಣೆಯಷ್ಟೇ. ಪ್ರೀತಿ ಎಂದೂ ಕ್ಷಮೆ ಕೇಳುವುದಿಲ್ಲ' ಎಂದಿದ್ದಾರೆ. ಇದು ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದೆ.

ಸ್ಪಷ್ಟನೆ ಶಿವಣ್ಣ

ಕೆಲ ವರ್ಷಗಳ ಹಿಂದೆ ತೆಲುಗು ನಿರ್ಮಾಪಕ ದಿಲ್​ ರಾಜು ಸಿನಿಮಾ ವೇದಿಕೆಯಲ್ಲಿ ಕನ್ನಡದಲ್ಲಿ ಕಡಿಮೆ ಬಜೆಟ್​ ಸಿನಿಮಾಗಳಷ್ಟೇ ಮಾಡುತ್ತಾರೆ, ಅದೊಂದು ಚಿಕ್ಕ ಚಿತ್ರರಂಗ ಎಂದಿದ್ದರು. ಅದಕ್ಕೆ ಅದೇ ವೇದಿಕೆಯಲ್ಲಿ ನಟ ಯಶ್​ ಉತ್ತರ ನೀಡಿದ್ದರು. ಕೆಲ ವರ್ಷಗಳ ಹಿಂದೆ ಬಾಲಿವುಡ್​ ನಟ ಅಜಯ್​ ದೇವ್ಗನ್​ ಮತ್ತು ಕನ್ನಡದ ಕಿಚ್ಚ ಸುದೀಪ್​ ನಡುವೆಯೂ ಜಾಲತಾಣದಲ್ಲಿ ಭಾಷೆಯ ವಿಷಯದಲ್ಲಿ ಚರ್ಚೆಯಾಗಿತ್ತು. ಬಳಿಕ "ತಪ್ಪು ತಿಳುವಳಿಕೆಯಿಂದ ಆಗಿದೆ' ಎಂದು ಅಜಯ್​ ದೇವ್ಗನ್​ ಕ್ಷಮೆ ಕೇಳಿದ್ದರು. ಆದರೆ, ಚೆನ್ನೈ ಕಾರ್ಯಕ್ರಮದಲ್ಲಿ ತಮ್ಮ ಎದುರೇ ಕಮಲ್​ ಹಾಸನ್​ "ಕನ್ನಡ ತಮಿಳಿನಿಂದ ಬಂದಿದ್ದು' ಎಂಬ ಹೇಳಿಕೆ ನೀಡಿದ್ದರೂ, ಶಿವರಾಜಕುಮಾರ್​, ಅದರ ಬಗ್ಗೆ ಮೌನವಹಿಸಿದ್ದರು. ಮಾತ್ರವಲ್ಲ ಬುಧವಾರ ಕಾರ್ಯಕ್ರಮವೊಂದರಲ್ಲಿ ಶಿವಣ್ಣ, "ಕನ್ನಡ ಪ್ರೇಮ ಯಾರೋ ಮಾತನಾಡಿದಾಗ ಬರಬಾರದು. ಪ್ರತಿ ಹಂತದಲ್ಲೂ ಇರಬೇಕು. ಕನ್ನಡಕ್ಕಾಗಿ ಹೋರಾಡ್ತೀವಿ, ಸಾಯ್ತೀವಿ. ಬರೀ ಮಾತಿನಲ್ಲಲ್ಲ. ಕಮಲ್​ ಹಾಸನ್​ ಬಗ್ಗೆ ನಾನೇನೂ ಮಾತನಾಡಬೇಕಿಲ್ಲ. ಅವರು ಹಿರಿಯರು, ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಅವರಿಗೆ ಏನು ಮಾಡಬೇಕು ಅಂತ ಗೊತ್ತಿರುತ್ತದೆ' ಎಂದಿದ್ದಾರೆ.

ಸೋನುಗೊಂದು, ಕಮಲ್​ಗೊಂದು!

ಕೆಲ ದಿನಗಳ ಹಿಂದಷ್ಟೇ ಬಾಲಿವುಡ್​ ಗಾಯಕ ಸೋನು ನಿಗಮ್​ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದ ವೇಳೆ, ಕೆಲವರು ಕನ್ನಡ ಹಾಡುಗಳನ್ನು ಹಾಡುವಂತೆ ಗಲಾಟೆ ಮಾಡಿದ ಕಾರಣ, "ಪಹಲ್ಗಾಂನಲ್ಲಿ ಉಗ್ರರು ದಾಳಿ ನಡೆಸಲು ಇದೇ ಕಾರಣ' ಎಂದಿದ್ದರು. ಬಳಿಕ ಕನ್ನಡಪರ ಸಂಟನೆಗಳು ಅವರ ಹೇಳಿಕೆಯ ವಿರುದ್ಧ ಹೋರಾಟ ಪ್ರಾರಂಭಿಸಿದವು. ಅದರ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ನಡೆಸಿ, ಸೋನು ನಿಗಮ್​ಗೆ ಕನ್ನಡ ಚಿತ್ರರಂಗದಲ್ಲಿ ಕೆಲಸ ನೀಡದಿರಲು, ಅವರು ಕರ್ನಾಟಕದಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಅದಕ್ಕೆ ಸಹಕಾರ ನೀಡದಿರಲು ತೀರ್ಮಾನಿಸಿದ್ದರು. ಬಳಿಕ ಸೋನು ನಿಗಮ್​ ಟನೆಯ ಬಗ್ಗೆ ಸ್ಪಷ್ಟನೆ ನೀಡಲು ಮುಂದಾದರು. ಆದರೆ, ಅವರ ಸಮರ್ಥನೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ "ಕ್ಷಮಿಸು ಕರ್ನಾಟಕ. ನನ್ನ ಅಹಂಗಿಂತ, ನಿನ್ನ ಮೇಲಿನ ಪ್ರೀತಿ ದೊಡ್ಡದು. ಲವ್​ ಯೂ ಆಲ್ವೇಸ್​' ಎಂದು ಕ್ಷಮೆಯಾಚಿಸಿದ್ದರು. ಆದರೆ, ವಾಣಿಜ್ಯ ಮಂಡಳಿ ಸಭೆ ನಡೆಸಿ ಅಸಹಕಾರದ ಎಚ್ಚರಿಕೆ ನೀಡದೇ ಕಮಲ್​ಗೆ ಕ್ಷಮೆಯಾಚಿಸಲು ಕಾಲಾವಕಾಶ ನೀಡಿದೆ.

ನಾಯಕತ್ವ ಕೊರತೆ

ಹಲವು ವರ್ಷಗಳ ಕಾಲ ಡಾ. ರಾಜಕುಮಾರ್​ ಕನ್ನಡ ಚಿತ್ರರಂಗದ ನೇತೃತ್ವ ವಹಿಸಿದ್ದರು. ಬಳಿಕ ಡಾ. ಅಂಬರೀಷ್​ ಚಿತ್ರರಂಗದ ಸಮಸ್ಯೆಗಳಿಗೆ ಧ್ವನಿಯಾಗಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಆ ನಾಯಕತ್ವದ ಕೊರತೆ ಚಂದನವನವನ್ನು ಕಾಡುತ್ತಿದೆ. ಚಿತ್ರರಂಗದ ಮಾತೃಸಂಸ್ಥೆಯಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇತ್ತು. ಇದೀಗ ಮೂರು ಮಂಡಳಿಗಳಾಗಿವೆ. ಮಂಡಳಿ ಆಯೋಜಿಸುವ ಕಾರ್ಯಕ್ರಮಗಳಿರಲಿ, ನಡೆಸುವ ಹೋರಾಟಗಳಿಗೂ ಮೂರು ಮತ್ತೊಬ್ಬ ಸ್ಟಾರ್​ ನಟರು ಬಂದರೆ ಹೆಚ್ಚು. ಹೀಗೆ ಮಂಡಳಿಯ ಜತೆಜತೆಗೆ ಕನ್ನಡ ಚಿತ್ರರಂಗವೂ ಮನೆಯೊಂದು ಮುರು ಬಾಗಿಲು ಎಂಬಂತಾಗಿ, ನಾಯಕತ್ವದ ಕೊರತೆಯಿಂದ ಬಸವಳಿದಿದೆ.

ಸ್ಟಾರ್​ವಾರ್​, ಫ್ಯಾನ್ಸ್​ವಾರ್​

ಪ್ರತಿವರ್ಷ ಕನ್ನಡದಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರೂ, ಯಶಸ್ಸು ಗಳಿಸುವ ಸಿನಿಮಾಗಳ ಸಂಖ್ಯೆ ಎರಡಂಕಿ ಮುಟ್ಟುತ್ತಿಲ್ಲ. ಅದರ ನಡುವೆ ಇರುವ ಕೆಲವೇ ಸ್ಟಾರ್​ಗಳ ಪೈಕಿ ಒಗ್ಗಟ್ಟಿಲ್ಲ. ಜತೆಗೆ ಕನ್ನಡದ ಸ್ಟಾರ್​ಗಳ ಅಭಿಮಾನಿಗಳ ನಡುವೆಯೇ ಆನ್​ಲೈನ್​ ಫ್ಯಾನ್​​ವಾರ್​ ಕೂಡ ಆಗಾಗ ನಡೆಯುತ್ತಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net