

ಕಳೆದ ಕೆಲವು ದಿನಗಳಿಂದ ಎಲ್ಲೆಲ್ಲೂ ‘ರಾಮಾಯಣ’ ಮತ್ತು ‘ಮಹಾಭಾರತ’ದ್ದೇ ಸುದ್ದಿ. 80ರ ದಶಕದ ಕೊನೆಯಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಈ ಧಾರಾವಾಹಿಗಳು ಕ್ರಮೇಣ ಜನರ ನೆನಪಿನಿಂದ ಮರೆಯಾಗುತ್ತಿರುವ ಸಂದರ್ಭದಲ್ಲೇ, ದೂರದರ್ಶನ ಈ ಎರಡೂ ಧಾರಾವಾಹಿಗಳನ್ನು ಕಳೆದ ಕೆಲವು ದಿನಗಳಿಂದ ಪುನಃ ಪ್ರಸಾರ ಮಾಡುತ್ತಿದೆ. ಯಾವಾಗ ಮರುಪ್ರಸಾರ ಶುರುವಾಯ್ತೋ, ಈ ಎರಡೂ ಧಾರಾವಾಹಿಗಳ ಹಿಂದಿನ ಕಥೆಗಳು ಸಹ ಸುದ್ದಿಯಾಗುತ್ತಿವೆ.
ಪ್ರಮುಖವಾಗಿ ‘ಮಹಾಭಾರತ’ದಲ್ಲಿ ದ್ರೌಪದಿಯಾಗಿ ಮೊದಲು ಆಯ್ಕೆಯಾಗಿದ್ದು ಯಾರು ಗೊತ್ತಾ? ಜೂಹಿ ಚಾವ್ಲಾ. ಆಗಷ್ಟೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಜೂಹಿ ಅವರನ್ನು ಮೊದಲು ದ್ರೌಪದಿ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತಂತೆ. ಅಷ್ಟರಲ್ಲಿ ಜೂಹಿಗೆ ಅಮೀರ್ ಖಾಣ್ ಅಭಿನಯದ ಮೊದಲ ಚಿತ್ರವಾದ ‘ಖಯಾಮತ್ ಸೇ ಖಯಾಮತ್ ತಕ್’ನಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿದೆ. ಹಿರಿತೆರೆಯೋ, ಕಿರುತೆರೆಯೋ ಎಂಬ ಜಿಜ್ಞಾಸೆಯಲ್ಲಿದ್ದ ಜೂಹಿ, ಕೊನೆಗೆ ಎಸ್ ಎಂದಿದ್ದು ಹಿರಿತೆರೆಗೆ. ‘ಖಯಾಮತ್ ಸೇ ಖಯಾಮತ್ ತಕ್’ ಚಿತ್ರದಲ್ಲಿ ಜೂಹಿ ನಟಿಸಿದರು. ಚಿತ್ರ ಸೂಪರ್ ಹಿಟ್ ಆಯಿತು. ಆ ನಂತರ ಜೂಹಿ, ಬಾಲಿವುಡ್‌ನಲ್ಲಿ ದೊಡ್ಡ ತಾರೆಯಾಗಿ ಮೆರೆದರು. ಅಷ್ಟೇ ಅಲ್ಲ, ಕನ್ನಡದಲ್ಲೂ ‘ಪ್ರೇಮ ಲೋಕ’, ‘ಕಿಂದರಿ ಜೋಗಿ’, ‘ಶಾಂತಿ ಕ್ರಾಂತಿ’ ಮುಂತಾದ ಚಿತ್ರಗಳಲ್ಲಿ ನಟಿಸಿದರು.
ಜೂಹಿ ಬೇಡ ಎಂದ ಪಾತ್ರಕ್ಕೆ, ಸೂಕ್ತ ಪಾತ್ರಧಾರಿಯ ಹುಡುಕಾಟದಲ್ಲಿದ್ದ ಧಾರಾವಾಹಿಯ ತಂಡಕ್ಕೆ ಸಿಕ್ಕವರು ರೂಪಾ ಗಂಗೂಲಿ. ಅಂಥದ್ದೊಂದು ಅವಕಾಶ ಸಿಗುತ್ತಿರುವುದಕ್ಕೆ ಖುಷಿಯಿಂದ ಒಪ್ಪಿಕೊಂಡ ರೂಪಾ, ದ್ರೌಪದಿ ಪಾತ್ರವನ್ನು ನಿರ್ವಹಿಸಿ ಎಲ್ಲರಿಂದ ಮೆಚ್ಚುಗೆ ಪಡೆದರು. ನಂತರದ ದಿನಗಳಲ್ಲಿ ರೂಪಾ, ಕನ್ನಡದಲ್ಲೂ ‘ಕದನ’ ಮತ್ತು ‘ಇನ್‌ಸ್ಪೆಕ್ಟರ್ ಧನುಷ್’ ಚಿತ್ರಗಳಲ್ಲಿ ನಟಿಸಿದರು.