'96' ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು ಜಾನಕಮ್ಮ! ಚಿತ್ರಮಂದಿರದಲ್ಲಿ ಕಾಣದ ಸೀನ್​ ಡಿಲೀಟ್​ ಮಾಡಿದ್ದೇಕೆ?

ಎಸ್​. ಜಾನಕಿ ಅವರು ಕೊನೆಯದಾಗಿ 96 ಚಿತ್ರದಲ್ಲಿ ನಟಿಸಿದ್ದ ದೃಶ್ಯ
ಎಸ್​. ಜಾನಕಿ ಅವರು ಕೊನೆಯದಾಗಿ 96 ಚಿತ್ರದಲ್ಲಿ ನಟಿಸಿದ್ದ ದೃಶ್ಯ
Published on

ಪ್ರಮುಖ ಮುಖ್ಯಾಂಶಗಳು

  • 'ಸ್ವರ ಸರಸ್ವತಿ', ಭಾರತೀಯ ಸಂಗೀತ ಲೋಕದ ಗಾನ ಕೋಗಿಲೆ ವಿಧಿವಶ
  • ಎಸ್​. ಜಾನಕಿ ಕೊನೆ ಬಾರಿಗೆ ಸಿನಿಮಾದಲ್ಲಿ ಕಾಣಿಸಿಕೊಂಡ ದೃಶ್ಯವೇ ಡಿಲೀಟ್​
  • 96 ಚಿತ್ರದಿಂದ ಅವರು ನಟಿಸಿದ್ದ ದೃಶ್ಯವನ್ನು ಡಿಲೀಟ್​ ಮಾಡಿದ್ದೇಕೆ?
S Janaki: ತಮಿಳಿನಲ್ಲಿ ನಿರ್ದೇಶಕ ಸಿ. ಪ್ರೇಮ್​ ಕುಮಾರ್​ ನಿರ್ದೇಶನದಲ್ಲಿ ಮೂಡಿಬಂದ 2018ರಲ್ಲಿ ಬ್ಲಾಕ್​ಬಸ್ಟರ್​ ಕಲ್ಟ್ ’96’ ಸಿನಿಮಾ ಬಹುತೇಕ ಸಿನಿಪ್ರಿಯರ ಹೃದಯ ಗೆದ್ದ ಒಂದೊಳ್ಳೆ ಚಿತ್ರಕಥೆ. ವಿಜಯ್​ ಸೇತುಪತಿ ಮತ್ತು ತ್ರಿಷಾ ಕೃಷ್ಣನ್​ ಮುಖ್ಯಭೂಮಿಕೆಯಲ್ಲಿ ನಟಿಸಿದ ಈ ಚಿತ್ರಕ್ಕೆ ಇಂದಿಗೂ ದೊಡ್ಡ ಅಭಿಮಾನಿ ಬಳಗವೇ ಇದೆ. ಇಂಥ ಸೂಪರ್​ಹಿಟ್​ ಸಿನಿಮಾದಲ್ಲಿ ಭಾರತದ ಗಾನಕೋಗಿಲೆ ಎಸ್​. ಜಾನಕಿಯಮ್ಮ ಒಂದು ಸಣ್ಣ ದೃಶ್ಯದಲ್ಲಿ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು ಎಂಬ ಸಂಗತಿ ಸದ್ಯ ಹಲವರನ್ನು ಗೊಂದಲಕ್ಕೆ ದೂಡಿದೆ. 
'ಸ್ವರ ಸರಸ್ವತಿ', ಭಾರತೀಯ ಸಂಗೀತ ಲೋಕದ 'ಗಾನ ಕೋಗಿಲೆ', ಎಲ್ಲ ವಯಸ್ಸಿನ ಧ್ವನಿಗಳಲ್ಲಿಯೂ ಹಾಡಿದ ದಿಗ್ಗಜ ಗಾಯಕಿ ಎಸ್. ಜಾನಕಿ ಅಮ್ಮನವರು ವಯೋಸಹಜ ಕಾಯಿಲೆಗಳಿಂದ ಮೈಸೂರಿನಲ್ಲಿ ಕೊನೆಯುಸಿರೆಳೆದರು. ಈ ಸುದ್ದಿ ಕೇಳಿ ಸಂಗೀತ ಲೋಕವೇ ಅಕ್ಷರಶಃ ಶೋಕದಲ್ಲಿ ಮುಳುಗಿದ್ದು, ಚಿತ್ರರಂಗದ ಕಲಾವಿದರು, ರಾಜಕೀಯ ಗಣ್ಯರು ಮತ್ತು ಅಭಿಮಾನಿಗಳು ಭಾವುಕರಾಗಿದ್ದಾರೆ. ಇದೇ ಸಂದರ್ಭದಲ್ಲಿ, ಜಾನಕಮ್ಮ ಕೊನೆಯದಾಗಿ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡ ಸಿನಿಮಾದ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 
ಸರಳ, ಸುಂದರ ಮತ್ತು ನವೀರಾದ ಪ್ರೇಮಕಥೆಯನ್ನು ಹೊಂದಿರುವ ಚಿತ್ರದಲ್ಲಿ, ರಾಮ್ ಮತ್ತು ಜಾನು ಪಾತ್ರಗಳಲ್ಲಿ ಚಿತ್ರಪ್ರೇಮಿಗಳ ಮನಸೂರೆಗೊಳಿಸಿದ ತ್ರಿಶಾ ಮತ್ತು ವಿಜಯ್ ಸೇತುಪತಿ ಅಭಿನಯ ಇಂದಿಗೂ ನೋಡುಗರ ಕಣ್ಣಿನಲ್ಲಿ ಕಟ್ಟಿದಂತಿದೆ. ಅಸಲಿಗೆ ತೆರೆಕಂಡ ಸಿನಿಮಾದಲ್ಲಿ ಎಸ್​. ಜಾನಕಿ ಅವರು ಅಭಿನಯಿಸಿರುವ ದೃಶ್ಯವನ್ನು ಡಿಲೀಟ್​​ ಮಾಡಿ, ಉಳಿದ ಸೀನ್​ಗಳನ್ನು ಇಟ್ಟು ಪ್ರದರ್ಶಿಸಲಾಗಿದೆ. ಇದಕ್ಕೆ ಕಾರಣ ಏನೆಂದು ಹುಡುಕಿದಾಗ, ಚಿತ್ರದ ರನ್‌ಟೈಮ್‌ ಕಡಿತಗೊಳಿಸಲು ಬೇರೆ ಆಯ್ಕೆಗಳಿಲ್ಲದೆ, ಅವರ ಸೀನ್​ ಅನ್ನು ಕಟ್‌ ಮಾಡಲಾಯಿತು ಎಂದು ವಿವರಿಸಲಾಗಿದೆ.
ಸಿನಿಮಾ ಬಿಡುಗಡೆಗೊಂಡು ಸೂಪರ್​ಹಿಟ್​ ಆದ ಕೆಲವು ವರ್ಷಗಳ ಬಳಿಕ ಈ ಡಿಲೀಟ್​ ಸೀನ್​ ಸಿನಿಪ್ರೇಮಿಗಳ ಗಮನಕ್ಕೆ ಬಂದಿತು. ಕೆಲವರು ಇದಕ್ಕೆ ಚಿತ್ರತಂಡದ ವಿರುದ್ಧ ತೀರ ಆಕ್ಷೇಪಣೆ ಹೊರಹಾಕಿದರು. ಆದರೀಗ, ಅವರ ನಿಧನದ ನಂತರ ಈ ದೃಶ್ಯ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವುದು ನೋಡಿ ಅಭಿಮಾನಿಗಳು ಜಾಲತಾಣಗಳಲ್ಲಿ ಭಾವುಕರಾಗಿ ಕಾಮೆಂಟ್​ ಮಾಡಿದ್ದಾರೆ. 

96 ಸೀಕ್ವೆಲ್​...

ತಮಿಳಿನಲ್ಲಿ ಬ್ಲಾಕ್​ಬಸ್ಟರ್​ ಹಿಟ್​ ಚಿತ್ರಗಳನ್ನೇ ನೀಡುತ್ತ ಬಂದಿರುವ ನಿರ್ದೇಶಕ ಸಿ. ಪ್ರೇಮ್​ ಕುಮಾರ್​, ಇತ್ತೀಚೆಗೆ ತೆರೆಕಂಡ ‘ಮಿಯ್ಯಾಳಗನ್’ ಚಿತ್ರದಲ್ಲಿಯೂ ಅದ್ಭುತ ಯಶಸ್ಸನ್ನು​ ಕಂಡರು. ಸಿನಿಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದ ಬೆನ್ನಲ್ಲೇ ’96’ ಸಿನಿಮಾದ ಸೀಕ್ವೆಲ್​ ತೆರೆಗೆ ತರಲು ನಿರ್ದೇಶಕರು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಈ ಕುರಿತು ಹೊಸ ಮಾಹಿತಿಯನ್ನು ಕೂಡ ಹಂಚಿಕೊಂಡಿದ್ದಾರೆ. ಆದರೆ, ಯಾವಾಗ ಸಿನಿಮಾ ತೆರೆಗೆ ಬರಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net