

Madan Bob : ತಮಿಳು ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ಮತ್ತು ಸಂಗೀತಗಾರ ಮದನ್ ಬಾಬ್ ಕೊನೆಯುಸಿರೆಳೆದಿದ್ದಾರೆ. ನಿನ್ನೆ (ಆಗಸ್ಟ್ 02) ರಾತ್ರಿ 71ನೇ ವಯಸ್ಸಿನಲ್ಲಿ ವೃದ್ಧಾಪ್ಯ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳಿಂದ ನಿಧನರಾದರು. ಚಿತ್ರರಂಗಕ್ಕೆ ಇದೊಂದು ದುಃಖಕರ ಸುದ್ದಿಯಾಗಿದ್ದು, ಕಾಲಿವುಡ್ ಸಿನಿಪ್ರೇಮಿಗಳು ಮತ್ತು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಮದನ್ ಬಾಬ್ ಅವರು ಕ್ಯಾನ್ಸರ್ನಿಂದಲೂ ಬಳಲುತ್ತಿದ್ದರು. ಇದರಿಂದಾಗಿ ಅವರು ದೀರ್ಘಕಾಲ ಆಸ್ಪತ್ರೆಯಲ್ಲಿದ್ದರು. ಚೆನ್ನೈನ ಅಡ್ಯಾರ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಮದನ್ ಅವರು ತಮ್ಮ ಪತ್ನಿ ಸುಶೀಲಾ, ಮಗಳು ಜನನಿ ಮತ್ತು ಮಗ ಅರ್ಷೀದ್ ಅವರನ್ನು ಅಗಲಿದ್ದಾರೆ.
ಮದನ್ ಬಾಬ್ ಅವರು ಮೆಡಿಕಲ್ ರೆಪ್ರೆಸೆಂಟೆಟಿವ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದಾದ ಬಳಿಕ ಸಂಗೀತ ಕ್ಷೇತ್ರವನ್ನು ಪ್ರವೇಶಿಸಿದರು ಮತ್ತು ನಟರಾಗುವ ಮೊದಲು ಅನೇಕ ತಮಿಳು ಸಂಗೀತ ನಿರ್ದೇಶಕರ ಬಳಿ ಕೆಲಸ ಮಾಡಿದರು. ಸುಮಾರು 200ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿರುವ ಮದನ್ ಬಾಬ್, ಹಾಸ್ಯನಟನಾಗಿ ಉತ್ತಮ ಖ್ಯಾತಿಯನ್ನು ಗಳಿಸಿದರು. ಅವರ ನಿಜವಾದ ಹೆಸರು ಕೃಷ್ಣಮೂರ್ತಿ ಆದರೆ, ಸಿನಿಮಾಗಳ ಯಶಸ್ಸಿನ ಬಳಿಕ ಮದನ್ ಬಾಬ್ ಎಂದು ಬದಲಾಯಿತು.
ಮೂಲತಃ ಸಂಗೀತಗಾರರಾಗಿದ್ದ ಅವರು ಗಿಟಾರ್ ವಾದಕರಾಗಿದ್ದರು. ದೂರದರ್ಶನ ಟಿವಿಯಲ್ಲಿ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದರು. ನಂತರ, ಅವರು ಕೆ. ಬಾಲಚಂದರ್ ಅವರೊಂದಿಗೆ ನಟನೆಗೆ ಪ್ರವೇಶಿಸಿದರು. 'ವಾಯ ಕೆಟ್ಟೈ' ಚಿತ್ರದಲ್ಲಿ ಕೀಬೋರ್ಡ್ ಕಲಾವಿದರಾಗಿ ಪಾದಾರ್ಪಣೆ ಮಾಡಿದ ಅವರು 'ವಾನಮೆ ಅಹಲ್ಯ, ದೇವನ್ ಮಗನ್, ಪೂವೆ ಉನಕ್ಕ, ಉನ್ನಿದಂ ಎನ್ನೈಕೆ ಕೊಟ್ಟೈನ್, ಫ್ರೆಂಡ್ಸ್, ತೆನಾಲಿ, ಅಯ್ಯ, ವೇಲ್' ಸೇರಿದಂತೆ ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದ ಹೊರತಾಗಿ, ಅವರು ಟಿವಿ ಹಾಸ್ಯ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ. ಅವರು ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ ಮತ್ತು ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲೂ ನಟಿಸಿದ್ದಾರೆ. ಇದಲ್ಲದೆ, ಅವರು ತಮ್ಮ ಯೌವನದಲ್ಲಿ ಓರ್ವ ಬಾಕ್ಸರ್ ಕೂಡ ಆಗಿದ್ದರು.
ಇತ್ತೀಚೆಗೆ, ಮದನ್ ಬಾಬ್ ಅವರು ಯಮನ್ ಕಟ್ಟಲೈ ಮತ್ತು ಧನುಷ್ ನಟನೆಯ ರಯಾನ್ ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡರು. ರಜನಿಕಾಂತ್, ಕಮಲ್ ಹಾಸನ್, ದಳಪತಿ ವಿಜಯ್, ಅಜಿತ್ ಮತ್ತು ಸೂರ್ಯ ಮುಂತಾದ ಸ್ಟಾರ್ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ.
ತಮ್ಮ ಬಹುತೇಕ ಎಲ್ಲ ಚಿತ್ರಗಳನ್ನು ತಮಿಳಿನಲ್ಲಿ ಮಾಡಿರುವ ಮದನ್ ಬಾಬ್, ಪವನ್ ಕಲ್ಯಾಣ್ ಅವರ ಬಂಗಾರಂ ಚಿತ್ರದಲ್ಲಿ ತೆಲುಗಿನಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಈ ಒಂದೇ ಚಿತ್ರದಲ್ಲಿ ಅವರು ನಟಿಸಿರುವುದು ಗಮನಾರ್ಹ. ಉಳಿದಂತೆ ಮಲಯಾಳಂನ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಒಂದೇ ಒಂದು ಸಿನಿಮಾದಲ್ಲಿ ಇವರು ನಟಿಸಿಲ್ಲ. (ಏಜೆನ್ಸೀಸ್)