

ಬೆಂಗಳೂರು: ಹೀರೋ-ಹೀರೋಯಿನ್ಗಳು ತಮ್ಮ ಸಿನಿಮಾ ಪ್ರೇಕ್ಷಕರ ಹೃದಯ ಗೆದ್ದು-ಕದ್ದು ಸ್ಟಾರ್ ನಟ-ನಟಿಯರು ಎನಿಸಿಕೊಳ್ಳುವುದು ಹೊಸದೇನಲ್ಲ. ಹೀಗೆ ಅಭಿಮಾನಿಗಳ ಹೃದಯ ಕದ್ದ-ಗೆದ್ದ ಹೀರೋ-ಹೀರೋಯಿನ್ಸ್ ಸ್ಯಾಂಡಲ್ವುಡ್ನಲ್ಲಿ ಹಲವರಿದ್ದಾರೆ. ಆದರೆ ಹೀರೋ ಅಥವಾ ಹೀರೋಯಿನ್ನೇ ಕಳ್ಳಿ ಎನಿಸಿಕೊಂಡರೆ ಅಥವಾ ತಾನೇ ಕಳ್ಳಿ ಎಂದು ಹೇಳಿಕೊಂಡರೆ..?!
ಹೌದು.. ನಟಿ ಹರಿಪ್ರಿಯಾ ಯಾವಾಗಲೋ ಕಳ್ಳಿ ಎನಿಸಿಕೊಂಡಿದ್ದಾರೆ. ಹಾಗಂತ ಇದೇನೂ ಗಾಸಿಪ್ ಅಲ್ಲ, ಇದನ್ನು ಹರಿಪ್ರಿಯಾ ಖುದ್ದು ಹೇಳಿಕೊಂಡಿದ್ದಾರೆ. "ನನಗೆ ಸ್ಟೇಷನರೀಸ್ ಎಂದರೆ ತುಂಬಾ ಇಷ್ಟ. ಅವುಗಳೆಡೆಗಿನ ನನ್ನ ಪ್ರೀತಿ ಯಾವತ್ತೂ ಸಾಯುವುದಿಲ್ಲ. ಅವುಗಳಿಗೆ ಸಂಬಂಧಿಸಿದ ಹಾಗೆ ಒಂದು ಘಟನೆ ಇದೆ, ಅದನ್ನು ಹೇಳಿಕೊಂಡು ನನ್ನ ಅಣ್ಣ ಯಾವತ್ತೂ ತಮಾಷೆ ಮಾಡುತ್ತಿರುತ್ತಾನೆ. ನಾನು ಎಲ್ಲಾದರೂ ದೂರ ಹೋದಾಗ, ಹೋಟೆಲ್ನಲ್ಲಿ ಉಳಿದಾಗ ಅಲ್ಲಿ ನೋಟ್ಪ್ಯಾಡ್ ಹಾಗೂ ಪೆನ್ಸಿಲ್ ಇಟ್ಟಿರುತ್ತಾರಲ್ವ, ರೂಮ್ ಖಾಲಿ ಮಾಡುವಾಗ ಅದನ್ನು ತೆಗೆದುಕೊಂಡು ಬರುತ್ತೇನೆ. ಅದಕ್ಕೇ ನನ್ನ ಅಣ್ಣ ಯಾವಾಗಲೂ ನನ್ನನ್ನು ಕಳ್ಳಿ ಎನ್ನುತ್ತಿರುತ್ತಾನೆ. ಹೋಟೆಲ್ನಲ್ಲಿ ಉಳಿಯುವುದಕ್ಕೆ ನಾವು ಸಾವಿರಾರು/ಲಕ್ಷಾಂತರ ರೂಪಾಯಿ ಕೊಡುತ್ತೇವೆ. ನೀನು ಅಲ್ಲಿರುವ ಐದು-ಹತ್ತು ರೂಪಾಯಿಯ ಪೆನ್ಸಿಲ್ ಕದೀತಿಯಾ ಎನ್ನುತ್ತಾನೆ. ಆದರೆ ಅದನ್ನು ನಮ್ಮಂಥ ಗೆಸ್ಟ್ಗೆಂದೇ ಅವರು ಇಟ್ಟಿರುತ್ತಾರೆ, ಅದಕ್ಕೆ ನಾನು ಅದನ್ನು ತೆಗೆದುಕೊಳ್ಳುತ್ತೇನೆ ಎಂದು ನಾನು ನನ್ನನ್ನು ಸಮರ್ಥಿಸಿಕೊಳ್ಳುತ್ತೇನೆ" ಎಂಬುದಾಗಿ ಹರಿಪ್ರಿಯಾ ಅವರ 'ಬೇಬ್ನೋಸ್' ಬ್ಲಾಗ್ನಲ್ಲಿ ಹೇಳಿಕೊಂಡಿದ್ದಾರೆ. ತಮ್ಮಿಬ್ಬರ ನಡುವಿವ ವಾದ ಇನ್ನೂ ಇತ್ಯರ್ಥವಾಗಿಲ್ಲ ಎಂದೂ ಹೇಳಿಕೊಂಡಿರುವ ಅವರು, 'ನೀವು ಏನೆನ್ನುತ್ತೀರಿ, ನಾನು ಕಳ್ಳಿನಾ?' ಎಂದು ಅವರ ಓದುಗರ/ಅಭಿಮಾನಿಗಳ ಬಳಿಯೇ ಕೇಳಿದ್ದಾರೆ.