

ಬೆಂಗಳೂರು: ‘ಮೂರು ವರ್ಷಗಳ ಶ್ರಮ ನನಗೆ ಮಾತ್ರ ಗೊತ್ತು. ಸಣ್ಣ ಆಗಿ, ದಪ್ಪ ಆಗಿ ಸಾಕಷ್ಟು ಶ್ರಮ ಹಾಕಿದ್ದೆ. ಹೇಗೆ ಬೇಕಾದರೂ ಮಾಡಬಹುದು ಅಂತಿದ್ದರೆ, ಡ್ಯೂಪ್ ಹಾಕಬಹುದಿತ್ತು, ಗ್ರಾಫಿಕ್ಸ್ನಲ್ಲಿ ಏನಾದರೂ ಮಾಡಬಹುದಿತ್ತು. ಆದರೆ, ಅದ್ಯಾವುದೂ ಮಾಡದೇ, ಕಷ್ಟಪಟ್ಟು ಮಾಡಿದ್ದಕ್ಕೆ ಯಾವ ಸೀನ್ ಮಾಡಬೇಕು, ಯಾವುದನ್ನು ಮಾಡಬಾರದೆಂದು ಚೆನ್ನಾಗಿ ಅರ್ಥವಾಯಿತಲ್ಲ, ಯಾವುದಕ್ಕೆ ಎಷ್ಟು ಬೆಲೆ ಇದೆ ಅಂತ ಗೊತ್ತಾಯಿತಲ್ಲ, ಇನ್ನು ಮುಂದೆ ಮಾಡಿಕೊಂಡು ಹೋಗ್ತೀನಿ. ಪಟಪಟ ಅಂತ ಮಾಡಿಕೊಂಡು ಹೋಗ್ತೀನಿ ...’ ಇತ್ತೀಚಿನ ವಿವಾದಗಳಿಂದ ಧ್ರುವ ಸರ್ಜಾಗೆ ಬೇಸರವಾಗಿದೆಯಾ? ನೋವಾಗಿದೆಯಾ? ಇಲ್ಲದಿದ್ದರೆ, ಅವರು ಈ ರೀತಿ ಮಾತನಾಡಿದ್ದು ಏಕೆ? ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ, ಬೇಸರವೂ ಇಲ್ಲ, ನೋವೂ ಇಲ್ಲ, ತನಗೆ ಅರಿವಾಗಿದೆ ಎನ್ನುತ್ತಾರೆ ಧ್ರುವ.
‘ಏನೇ ಮಾಡಿದರೂ, ಅದಕ್ಕೊಂದು ತಪು್ಪ ಹುಡುಕುವುದಕ್ಕೆ ಬಂದಾಗ, ಅದಕ್ಕೆ ಎಲ್ಲರ ಸಪೋರ್ಟ್ ಸಿಕ್ಕಾಗ ಏನೂ ಮಾಡುವುದಕ್ಕೆ ಆಗುವುದಿಲ್ಲ. ಇಷ್ಟೆಲ್ಲ ಆದರೂ, ನಾವು ಯಾರ ಮೇಲೂ ತಪು್ಪ ಹಾಕಲಿಲ್ಲ. ನಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದೇವೆ. ಅದಕ್ಕೆ ಕ್ಷಮೆ ಕೇಳಿದ್ದೇವೆ. ಆದರೂ ಇಷ್ಟು ದೊಡ್ಡದಾಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ’ ಎನ್ನುತ್ತಾರೆ ಧ್ರುವ.
ಒಂದೆರೆಡು ಬೇಸರಗಳಿರಬಹುದು. ಆದರೆ, ‘ಪೊಗರು’ ಚಿತ್ರಕ್ಕೆ ಧ್ರುವಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ, ಚಿತ್ರಕ್ಕೊಂದು ಒಳ್ಳೆಯ ಓಪನಿಂಗ್ ಸಿಕ್ಕಿದೆ, ಕಲೆಕ್ಷನ್ ಅಂತೂ ಅದ್ಭುತವಾಗಿದೆ. ಅದೆಲ್ಲವನ್ನು ಬಿಟ್ಟು, ಒಂದು ವಿವಾದಕ್ಕೆ ಧ್ರುವ ಹೀಗೆ ಧೃತಿಗೆಡು ವುದು ಎಷ್ಟು ಸರಿ? ಈ ಬಗ್ಗೆ ಉತ್ತರಿಸುವ ಧ್ರುವ, ‘ನಾವು ಹಾಕಿದ ಶ್ರಮವನ್ನು ಮರೆಸುವಂತಹ ವಿವಾದಗಳನ್ನು ಎದು ರಿಸಬೇಕಾಯಿತು. ಏನೇ ಆದರೂ ನಾನು ನಂಬಿರುವುದು ಒಂದೇ ವಿಷಯ, ಬಗ್ಗಿಸಿ ಕೆಲಸ ಮಾಡಬೇಕು ಎಂದು. ಆಗಲೇ ಜನಕ್ಕೆ ಇಷ್ಟ ಆಗೋದು. ಆ ಕಾರಣಕ್ಕೆ ನಾನು ಯಾವತ್ತೂ ಸ್ಟಾಪ್ ಮಾಡಲ್ಲ, ಶ್ರದ್ಧೆಯಿಂದ ಕೆಲಸ ಮಾಡಿಕೊಂಡು ಹೋಗ್ತೀನಿ’ ಎಂದು ಪ್ರಾಮಿಸ್ ಮಾಡುತ್ತಾರೆ ಧ್ರುವ.
ಹಾಕಿದ್ದು 31; ತೆಗೆದಿದ್ದು 45
‘ಪೊಗರು’ ಚಿತ್ರದ ಬಜೆಟ್ ಎಷ್ಟು? 31 ಕೋಟಿ ರೂ. ಎನ್ನುತ್ತಾರೆ ಧ್ರುವ. ಆ ಹಣವನ್ನು ಒಂದೇ ವಾರದಲ್ಲಿ ನಿರ್ವಪಕರು ಬಾಚಿಕೊಂಡಿದ್ದಾರೆ. ಚಿತ್ರದ ಒಟ್ಟು ಆರು ದಿನಗಳ ಕಲೆಕ್ಷನ್ 45 ಕೋಟಿ ರೂ. ಆಗಿದೆಯಂತೆ. ಇದು ಬರೀ ಕರ್ನಾಟಕದಿಂದ ಬಂದ ಹಣವಂತೆ. ಇನ್ನು ಬೇರೆ ಭಾಷೆಗಳಿಗೆ ಡಬ್ಬಿಂಗ್ ಆಗಿದ್ದಕ್ಕೆ ಬಂದ ಮೊತ್ತ, ಡಿಜಿಟಲ್ ಮತ್ತು ಸ್ಯಾಟ್ಲೈಟ್ ಹಕ್ಕುಗಳಿಂದ ಸಿಕ್ಕ ದುಡ್ಡು ... ಇವೆಲ್ಲ ಲೆಕ್ಕ ಹಾಕಿದರೆ, ಹಾಕಿದ ಹಣ ಡಬ್ಬಲ್ ಆಗುತ್ತದೆ.