ಡಿವೋರ್ಸ್​ ಬೆನ್ನಲ್ಲೇ​ ಹನಿಮೂನ್​ ರಹಸ್ಯ ಬಯಲು: ಬೇರೆ ಬೇರೆ ರೂಮಿನಲ್ಲಿದ್ರು ರೆಹಮಾನ್-ಸಾಯಿರಾ! ಕಾರಣವೇನು? AR Rehaman

A R Rahman
Published on

AR Rehaman : ಬರೋಬ್ಬರಿ 29 ವರ್ಷಗಳ ವೈವಾಹಿಕ ಜೀವನ ನಡೆಸಿ, 30ನೇ ವರ್ಷಕ್ಕೆ ಕಾಲಿಡುವ ಮುನ್ನವೇ ಸಂಗೀತ ಮಾಂತ್ರಿಕ ಎ.ಆರ್​. ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಡಿವೋರ್ಸ್​ ಘೋಷಣೆ ಮಾಡಿರುವುದು ಸಿನಿ ಅಂಗಳದಲ್ಲಿ ಭಾರಿ ಸಂಚಲನ ಮೂಡಿಸಿದೆ. ನಿನ್ನೆಯಿಂದ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ ಆಗಿದ್ದು, ರೆಹಮಾನ್​ ಕುರಿತು ಸಾಕಷ್ಟು ಮಾಹಿತಿಗಳು ಬೆಳಕಿಗೆ ಬರುತ್ತಿವೆ.

ಎ.ಆರ್​. ರೆಹಮಾನ್​ ಅವರ ಮಾಜಿ ಪತ್ನಿ ಸಾಯಿರಾ ಅವರು ಮಲಯಾಳಂ ಖ್ಯಾತ ನಟ ರಶಿನ್​ ರೆಹಮಾನ್​ ಅವರ ಪತ್ನಿ ಮೆಹೆರುನ್ನೀಸಾ ಅವರ ಸಹೋದರಿ. ಹಿಂದೊಮ್ಮೆ ರಶಿನ್​ ರೆಹಮಾನ್​ ಅವರು ಸಿದ್ಧಾರ್ಥ್​ ಕಣ್ಣನ್​ ಅವರ ಯೂಟ್ಯೂಬ್​ ಚಾನೆಲ್​ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಎ.ಆರ್​. ರೆಹಮಾನ್​ ಬಗ್ಗೆ ಅವರಾಡಿದ್ದ ಮಾತುಗಳು ಇದೀಗ ಮತ್ತೆ ವೈರಲ್​ ಆಗುತ್ತಿವೆ.

ಎ.ಆರ್​. ರೆಹಮಾನ್​ ಅವರು ಸಾಯಿರಾ ಅವರನ್ನು ಮದುವೆಯಾದ ಬಳಿಕ ಗಿರಿಧಾಮವೊಂದಕ್ಕೆ ಹನಿಮೂನ್​ಗೆ ಕರೆದುಕೊಂಡು ಹೋಗಿದ್ದರು. ಆ ರಾತ್ರಿ ನಾನು ಕರೆ ಮಾಡಿದೆ. 12 ಅಥವಾ 1 ಗಂಟೆಯಾಗಿತ್ತು. ನನ್ನೊಂದಿಗೆ ಮಾತನಾಡಿದ ಸಾಯಿರಾ, ಅಷ್ಟರಲ್ಲಾಗಲೇ ಮಲಗಿರುವುದಾಗಿ ಹೇಳಿದರು. ರೆಹಮಾನ್​ ಎಲ್ಲಿ? ಎಂದು ಕೇಳಿದೆ. ಉತ್ತರಿಸಿದ ಸಾಯಿರಾ, ನನಗೆ ಗೊತ್ತಿಲ್ಲ ಅಂದರು. ಆದರೆ, ರೆಹಮಾನ್​ ಮತ್ತೊಂದು ರೂಮಿನಲ್ಲಿ ವೀಣೆ ನುಡಿಸುವುದನ್ನು ಅಭ್ಯಾಸ ಮಾಡುತ್ತಿದ್ದರು. ಏನೋ ಒಂದು ಮ್ಯೂಸಿಕ್​ ಕಂಪೋಸ್​ ಮಾಡುತ್ತಿದ್ದರು. ತಮ್ಮ ಕೆಲಸದ ಮೇಲೆ ಎ.ಆರ್​. ರೆಹಮಾನ್​ ಅವರಿಗೆ ಅಷ್ಟೊಂದು ಒಲವಿತ್ತು ಎಂದು ರಶಿನ್​ ರೆಹಮಾನ್​ ಸಂದರ್ಶನದಲ್ಲಿ ಹೇಳಿದ್ದರು.

ಅಂದಹಾಗೆ ಎ. ಆರ್. ರೆಹಮಾನ್ ಮತ್ತು ಸಾಯಿರಾ 1995 ರಲ್ಲಿ ವಿವಾಹವಾದರು. ಅನೇಕ ಸಂದರ್ಶನಗಳಲ್ಲಿ ತಮ್ಮದು ಅರೇಂಜ್ಡ್ ಮ್ಯಾರೇಜ್ ಎಂದು ರೆಹಮಾನ್​ ಹೇಳಿಕೊಂಡಿದ್ದಾರೆ. ಅವರ ತಾಯಿಯೇ ಸಾಯಿರಾ ಅವರನ್ನು ಹುಡುಕಿದರು. ಈ ವೇಳೆ ರೆಹಮಾನ್ ತಮ್ಮ ತಾಯಿಯ ಮುಂದೆ ಮೂರು ಬೇಡಿಕೆಗಳನ್ನು ಇಟ್ಟಿದ್ದರು. ವಿದ್ಯಾವಂತೆಯಾಗಿರಬೇಕು, ಸಂಗೀತವನ್ನು ಪ್ರೀತಿಸಬೇಕು ಮತ್ತು ಮಾನವೀಯತೆ ಇರಬೇಕೆಂದು ಹೇಳಿದ್ದರಂತೆ. ಈ ಮೂರು ಬೇಡಿಕೆಗಳಿಗೆ ಸಾಯಿರಾ ಹೇಳಿ ಮಾಡಿಸಿದಂತಿದ್ದರು ಎಂದು ಸ್ವತಃ ರೆಹಮಾನ್​ ಈ ಹಿಂದಿನ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.

ಸಾಯಿರಾ ಪರ ವಕೀಲರು ಹೇಳಿದ್ದೇನು?

ನ.19ರಂದು ಸಾಯಿರಾ ಪರ ವಕೀಲರಾದ ವಂದನಾ ಶಾ, ದಂಪತಿಯ ಡಿವೋರ್ಸ್​ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಮದುವೆಯಾಗಿ ಹಲವು ವರ್ಷಗಳ ನಂತರ ಸಾಯಿರಾ ಅವರು ಎ.ಆರ್. ರೆಹಮಾನ್‌ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಬ್ಬರ ಸಂಬಂಧದಲ್ಲಿ ಗಮನಾರ್ಹ ಭಾವನಾತ್ಮಕ ಒತ್ತಡದ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಬ್ಬರ ನಡುವಿನ ಆಳವಾದ ಪ್ರೀತಿಯ ಹೊರತಾಗಿಯೂ, ದಂಪತಿಗೆ ಎದುರಾಗಿರುವ ತೊಂದರೆಗಳು ಅವರ ನಡುವೆ ಅಂತರ ಸೃಷ್ಟಿಸಿವೆ. ಸಾಯಿರಾ ಅವರು ತುಂಬಾ ನೋವು ಮತ್ತು ಸಂಕಟದಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಜೀವನದ ಅತ್ಯಂತ ಕಠಿಣ ಸಮಯವನ್ನು ಎದುರಿಸುತ್ತಿರುವಾಗ ಸಾರ್ವಜನಿಕರು ಖಾಸಗಿತನವನ್ನು ಗೌರವಿಸಬೇಕೆಂದು ಸಾಯಿರಾ ಬಯಸಿರುವುದಾಗಿ ವದಂನಾ ಶಾ ತಿಳಿಸಿದರು.

ರೆಹಮಾನ್​ ಹೇಳಿದ್ದೇನು?

ರೆಹಮಾನ್ ಕೂಡ ಡಿವೋರ್ಸ್​ ಅನ್ನು ಖಚಿತಪಡಿಸಿದ್ದಾರೆ. ನಾವು 30 ವರ್ಷ ವೈವಾಹಿಕ ಜೀವನ ಪೂರೈಸಲು ಆಶಿಸಿದ್ದೆವು. ಆದರೆ, ಎಲ್ಲವೂ ಕಾಣದ ಅಂತ್ಯವನ್ನು ಹೊಂದಿದೆ ಎಂದು ತೋರುತ್ತದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಈ ಬೇರ್ಪಡಿಕೆಯಲ್ಲಿ ನಾವು ಅರ್ಥವನ್ನು ಹುಡುಕಿದರೂ ಮುರಿದ ತುಣುಕುಗಳು ಮತ್ತೆ ತಮ್ಮ ಸ್ಥಾನವನ್ನು ಕಂಡುಕೊಳ್ಳುವುದಿಲ್ಲ. ಈ ದುರ್ಬಲವಾದ ಅಧ್ಯಾಯದ ಮೂಲಕ ನಾವು ನಡೆಯುತ್ತಿರುವಾಗ ನಿಮ್ಮ ದಯೆ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ರೆಹಮಾನ್​ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಅಂದಹಾಗೆ ರೆಹಮಾನ್ ಮತ್ತು ಸಾಯಿರಾ 1995ರಲ್ಲಿ ವಿವಾಹವಾದರು. ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಹೆಸರಿನ ಮೂವರು ಮಕ್ಕಳಿದ್ದಾರೆ. ಇದೀಗ 29 ವರ್ಷಗಳ ವೈವಾಹಿಕ ಬದುಕಿಗೆ ಕೊನೆಯಾಡಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ, ರೆಹಮಾನ್ ಕೊನೆಯದಾಗಿ ಧನುಷ್ ಅವರ ಎರಡನೇ ನಿರ್ದೇಶನದ ರಾಯನ್​ಗೆ ಸಂಗೀತ ಸಂಯೋಜಿಸಿದರು. ಚಾವಾ ಹಾಗೂ ಥಗ್ ಲೈಫ್ ಸೇರಿದಂತೆ ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧವಾಗಿರುವ ಗಾಂಧಿ ಟಾಕ್ಸ್ ಹಾಗೂ ಹಲವು ಭಾಷೆಯ ಹಲವು ಚಿತ್ರಗಳಿಗೂ ಸಂಗೀತ ನೀಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net