ಇದಕ್ಕೆಲ್ಲ ಕೊನೆ ಯಾವಾಗ?; ಸ್ಯಾಂಡಲ್​ವುಡ್ ನಟಿಯರ ಅಭಿಪ್ರಾಯ

Star
Published on

ಮೈಸೂರಿನಲ್ಲಾದ ಗ್ಯಾಂಗ್​ರೇಪ್ ಪ್ರಕರಣದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಹಲವು ನಟಿಯರು ಈ ಬಗ್ಗೆ ಮಾತನಾಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಕೆಟ್ಟವರಿಗೆ ಒಳ್ಳೆಯವರೇ ಬಲಿ

ಈ ತರಹದ ಘಟನೆ ಕೇಳಿದರೆ ಭಯ ಆಗುತ್ತದೆ. ಒಳ್ಳೆಯದು ಹೇಗಿರುತ್ತದೋ ಕೆಟ್ಟ ಮೃಗಗಳೂ ಇರುತ್ತವೆ. ಆದರೆ, ಆ ಕೆಟ್ಟವರಿಗೆ ಬಲಿಯಾಗುವವರು ಒಳ್ಳೆಯವರೇ. ಇವತ್ತು ಆ ಹುಡುಗಿಯ ಹಿಂದೆ ಇಡೀ ರಾಜ್ಯ ಇದೆ. ಆ ಕುಟುಂಬದವರಲ್ಲಿ ನನ್ನದೊಂದು ಮನವಿ. ನಿಮ್ಮ ಮಗಳಿಗೆ ಧೈರ್ಯ ತುಂಬಿ. ಅದೇ ರೀತಿ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಲಿ.

| ಅದಿತಿ ಪ್ರಭುದೇವ

ಅಸಹ್ಯ ಎನಿಸುತ್ತಿದೆ

ಆ ಘಟನೆ ನಿಜಕ್ಕೂ ಖಂಡನೀಯ. ಬಹಳ ನೋವಾಗುತ್ತಿದೆ. ಅಸಹ್ಯ ಎನಿಸುತ್ತಿದೆ. ಈ ಪ್ರಕರಣಕ್ಕೆ ಯಾರು ಕಾರಣರಾಗಿದ್ದಾರೋ ಅವರನ್ನು ಹಿಡಿದು, ತಕ್ಷಣವೇ ಶಿಕ್ಷೆ ಕೊಡಬೇಕು ಎಂದು ಮನವಿ ಮಾಡುತ್ತೇನೆ. ಆ ಹುಡುಗಿಗೆ ನ್ಯಾಯ ಸಿಗಲಿ.

| ತಾರಾ

ಮಹಿಳೆಯರೇ ಹೊಣೆ ಏಕೆ?

ರೇಪ್ ಇರಬಹುದು ಅಥವಾ ದೈಹಿಕ ದಾಳಿ ಇರಬಹುದು, ಮಹಿಳೆಯರ ಮೇಲಿನ ಎಲ್ಲ ದೌರ್ಜನ್ಯ ಗಳಿಗೂ ಮಹಿಳೆಯನ್ನೇ ಹೊಣೆ ಮಾಡಲಾಗುತ್ತದೆ. ಅದು ನಿನ್ನ ತಪ್ಪು, ನೀನು ಹಾಗೆ ಮಾಡಬಾರದಿತ್ತು, ಅಷ್ಟು ಟೈಟ್ ಬಟ್ಟೆಗಳನ್ನು ಧರಿಸಬಾರದಿತ್ತು, ರಾತ್ರಿ ನೀನು ಹೊರಗೆ ಹೋಗಬಾರದಿತ್ತು, ಮೇಕಪ್ ಹಾಕಬಾರದಿತ್ತು... ಹೀಗೆ ನೂರು ಮಾತುಗಳು ಬರುತ್ತವೆ. ಏಕೆಂದರೆ, ಗಂಡಸರು ಎಷ್ಟಾದರೂ ಗಂಡಸರು, ಅವರೆದುರು ಹೆಂಗಸರು ರಾಜಿ ಮಾಡಿಕೊಳ್ಳಬೇಕು, ಅಡ್ಜಸ್ಟ್ ಮಾಡಿಕೊಳ್ಳಬೇಕು, ಬದಲಾಗಬೇಕು ... ಎಂಬ ಮನಸ್ಥಿತಿಗೆ ಬಂದಿದ್ದೇವೆ. ಅದು ಸಾಧ್ಯವಿಲ್ಲ, ಈ ಮನಸ್ಥಿತಿಗೆ ಪೂರ್ಣವಿರಾಮ ಹಾಡಲೇಬೇಕು.

| ರಮ್ಯಾ

ಕಾನೂನು ಮತ್ತಷ್ಟು ಗಟ್ಟಿಯಾಗಬೇಕಿದೆ...

ಹೆಣ್ಣುಮಕ್ಕಳ ಮೇಲಿನ ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ? ಇಂತಹ ಪುರುಷರ ಮನಸ್ಥಿತಿ ಬದಲಾಗುವುದು ಎಂದು? ಇಂಥ ಅನಿಷ್ಠ ಕಾಮುಕ ರನ್ನು ಬಂಧಿಸುವ, ಶಿಕ್ಷಿಸುವ ಕಾನೂನು ಮತ್ತಷ್ಟು ಗಟ್ಟಿಯಾಗಬೇಕು ಎನ್ನುವುದು ಎಷ್ಟು ಸತ್ಯವೋ, ಇಂತಹ ಪುರುಷರು ಬೆಳೆಯುವ ಮನೆಯ ವಾತಾವರಣ, ಸಂಸ್ಕಾರ, ಪೋಷಕರ ಜವಾಬ್ದಾರಿ ಕೂಡಾ ಮತ್ತಷ್ಟು ಗಟ್ಟಿಯಾಗಬೇಕು.

| ಶ್ರುತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net