

ಅಭಿಷೇಕ್ ಬಚ್ಚನ್ ಚಿತ್ರರಂಗಕ್ಕೆ ಬಂದು 20 ವರ್ಷಗಳಾಗಿವೆ. ಈ 20 ವರ್ಷಗಳಲ್ಲಿ ಅಭಿಷೇಕ್ ಸಾಕಷ್ಟು ನೋವು-ನಲಿವುಗಳನ್ನು ಕಂಡಿದ್ದಾರೆ. ನಲಿವು ಎನ್ನುವುದಕ್ಕಿಂತ ಅವರು ನೋವುಂಡಿದ್ದೇ ಹೆಚ್ಚು ಎಂದರೆ ತಪ್ಪಿಲ್ಲ.
ಇದನ್ನೂ ಓದಿ: ‘ಸಿಂಧೂರ ಲಕ್ಷ್ಮಣ’ ಚಿತ್ರದ ಬಗ್ಗೆ ಏನಂತಾರೆ ತರುಣ್?
ಅಭಿಷೇಕ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ, ಅವರ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಕಾರಣ, ಅವರು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಮಗ. ಚಿತ್ರರಂಗದಲ್ಲಿ ತಂದೆ ಸ್ಟಾರ್ ಆಗಿ ಬೆಳೆದಂತೆ, ಮಗ ಸಹ ಬೆಳೆಯಬಹುದು, ಕುಟುಂಬದ ಗೌರವವನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಹಲವರು ನಿರೀಕ್ಷಿಸಿದ್ದರು. ಆದರೆ, ಅಭಿಷೇಕ್ ವಿಷಯದಲ್ಲಿ ಹಾಗಾಗಲಿಲ್ಲ. ಅಭಿಷೇಕ್ ಹಲವು ಸೋಲುಗಳನ್ನು ಕಂಡರು. ಒಂದು ಹಂತದಲ್ಲಿ ಅವರ 14 ಚಿತ್ರಗಳು ಸತತವಾಗಿ ಫ್ಲಾಪ್ ಆಗಿದ್ದರಿಂದ, ಒಂದಿಷ್ಟು ದಿನ ಅವರು ಚಿತ್ರರಂಗದಿಂದ ಹೊರ ಉಳಿಯುವಂತಾಯಿತು.
ಇಷ್ಟೆಲ್ಲಾ ಸೋಲು, ಅವಮಾನಗಳನ್ನು ಕಂಡಿರುವ ಅಭಿಷೇಕ್ಗೆ ಇನ್ನೂ ಒಂದು ದೊಡ್ಡ ಅವಮಾನವಾಯಿತಂತೆ. ಚಿತ್ರಮಂದಿರಕ್ಕೆ ಒಮ್ಮೆ ಹೋದಾಗ, ಮಹಿಳೆಯೊಬ್ಬರು ಕಪಾಳಕ್ಕೆ ಹೊಡೆದು, ಇನ್ನು ಮುಂದೆ ನಟಿಸಬೇಡ ಎಂದು ಹೇಳಿದ್ದರಂತೆ.
ಈ ವಿಷಯವನ್ನು ಕೆಲವು ತಿಂಗಳ ಹಿಂದೆ ನಡೆದ ಸಮಾರಂಭವೊಂದರಲ್ಲಿ ನೆನಪಿಸಿಕೊಂಡಿರುವ ಅಭಿಷೇಕ್, 'ಅದು ನನ್ನ ಪಾಲಿನ ಅತ್ಯಂತ ಕೆಟ್ಟ ಸಮಯ ಎಂದರೆ ತಪ್ಪಿಲ್ಲ. ಒಂದರಹಿಂದೊಂದು ಚಿತ್ರಗಳು ಸೋಲುತ್ತಿದ್ದವು. ಆ ಸಂದರ್ಭದಲ್ಲಿ ಶರಾರತ್ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಆ ಚಿತ್ರ ಹೇಗೆ ಪ್ರದರ್ಶನ ಕಾಣುತ್ತಿದೆ, ಜನ ಚಿತ್ರದ ಬಗ್ಗೆ ಏನು ಹೇಳುತ್ತಿದ್ದಾರೆ ಎಂದು ತಿಳಿಯುವುದಕ್ಕೆ ಮುಂಬೈನ ಗೇಯ್ಟಿ ಗೆಲಾಕ್ಸಿ ಚಿತ್ರಮಂದಿರಕ್ಕೆ ಹೋಗಿದ್ದೆ. ಚಿತ್ರ ನೋಡಿ ಹೊರಬಂದ ಮಹಿಳೆಯೊಬ್ಬರು, ನನಗೆ ಕಪಾಳಕ್ಕೆ ಹೊಡೆದರು. ಈ ರೀತಿ ನಟನೆ ಮಾಡಿ, ನಿಮ್ಮ ಕುಟುಂಬದ ಗೌರವ ಹಾಳು ಮಾಡಬೇಡ ಎಂದು ರೇಗಿದ್ದರು. ಇನ್ನು ಮುಂದೆ ನಟಿಸಬೇಡ ಎಂದು ಹೇಳಿ ಹೋಗಿದ್ದರು' ಎಂದು ನೆನಪಿಸಿಕೊಂಡಿದ್ದರು ಅಭಿಷೇಕ್.
ಆ ಸಂದರ್ಭದಲ್ಲಿ ಅಭಿಷೇಕ್ಗೆ ಬಹಳ ಅವಮಾನವಾಯಿತಂತೆ. ಅಷ್ಟೇ ಅಲ್ಲ ಬಹಳ ನೋವಾಯಿತಂತೆ. ಆದರೆ, ಈಗ ನೆನಪಿಸಿಕೊಂಡರೆ ನಗುಬರುತ್ತದೆ ಎಂದು ಅಭಿಷೇಕ್ ಬಚ್ಚನ್ ಹೇಳಿಕೊಂಡಿದ್ದಾರೆ.