ಖಿನ್ನತೆ ಗೆದ್ದು ಬಂದ ಸಮಂತಾ ಹೇಳಿದ್ದೇನು?; ಸಮಸ್ಯೆ ಮುಚ್ಚಿಡಬೇಡಿ ಎಂದು ಮನವಿ

Samantha
Published on

ಕಳೆದ ವರ್ಷ ಅತೀ ಹೆಚ್ಚು ಟ್ರೋಲ್ ಆದವರ ಪಟ್ಟಿಯಲ್ಲಿ ಟಾಲಿವುಡ್ ನಟಿ ಸಮಂತಾ ಪ್ರಮುಖ ಸ್ಥಾನದಲ್ಲಿ ಸಿಗುತ್ತಾರೆ. ನಾಗಚೈತನ್ಯ ಜತೆಗೆ ಡಿವೋರ್ಸ್ ಆದ ನಂತರ ಸಮಂತಾ ಟ್ರೋಲ್​ಗೆ ಒಳಗಾಗಿದ್ದಷ್ಟೇ ಅಲ್ಲ, ಮಾನಸಿಕವಾಗಿ ಸಾಕಷ್ಟು ನೊಂದಿದ್ದರು. ಅಲ್ಲದೆ, ಖಿನ್ನತೆಗೊಳಗಾಗಿದ್ದರು. ಆದರೆ, ಅವೆಲ್ಲವನ್ನೂ ದಾಟಿ ಇನ್ನಷ್ಟು ಗಟ್ಟಿಯಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು, ‘ಯಾರ ಜೀವನವೂ ಪರ್ಫೆಕ್ಟ್ ಆಗಿರುವುದಿಲ್ಲ. ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ನ್ಯೂನತೆಗಳು ಇದ್ದೇ ಇರುತ್ತೇವೆ. ಇಂಥ ಸಂದರ್ಭದಲ್ಲಿ ಹಲವರು ಖಿನ್ನತೆಗೆ ಒಳಗಾಗುತ್ತಾರೆ. ಈ ಸಂದರ್ಭದಲ್ಲಿ ಯಾರೊಂದಿಗೂ ಮನಬಿಚ್ಚಿ ಮಾತನಾಡುವುದಕ್ಕೆ ಸಾಧ್ಯವಾಗುವುದಿಲ್ಲ. ನಾನು ಸಹ ಖಿನ್ನತೆಗೆ ಒಳಗಾಗಿದ್ದೆ. ಮಾನಸಿಕವಾಗಿ ಸಾಕಷ್ಟು ಹಿಂಸೆ ಅನುಭವಿಸಿದೆ. ಎಲ್ಲವನ್ನೂ ಧೈರ್ಯವಾಗಿ ಎದುರಿಸಿ, ಖಿನ್ನತೆಯಿಂದ ಹೊರಬಂದಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಸಾಕಷ್ಟು ಸ್ನೇಹಿತರು ಸಹಾಯ ಮಾಡಿದರು ಎಂದು ನೆನಪಿಸಿಕೊಳ್ಳುವ ಸಮಂತಾ, ‘ಡಿಪ್ರೆಶನ್​ನಿಂದ ಹೊರಬರುವುದಕ್ಕೆ ಹಲವು ಸ್ನೇಹಿತರು ಮತ್ತು ವೈದ್ಯರು ಸಹಾಯ ಮಾಡಿದ್ದಾರೆ. ಇಂಥ ಸಮಯದಲ್ಲಿ ನಾವು ನಮ್ಮ ಸಮಸ್ಯೆಗಳನ್ನು ಬೇರೆಯವರೊಂದಿಗೆ ಹೇಳಿಕೊಳ್ಳಬೇಕು. ನಮಗೆ ದೈಹಿಕವಾಗಿ ಸಮಸ್ಯೆ ಆದಾಗ, ವೈದ್ಯರನ್ನು ಸಂರ್ಪಸುವುದಿಲ್ಲವೇ? ಚಿಕಿತ್ಸೆ ಪಡೆಯುವುದಿಲ್ಲವೇ? ಅದೇ ತರಹ ಮಾನಸಿಕವಾಗಿ ಸಮಸ್ಯೆಗಳಿದ್ದರೂ ಧೈರ್ಯವಾಗಿ ಹೇಳಿಕೊಂಡು, ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು’ ಎನ್ನುತ್ತಾರೆ ಸಮಂತಾ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net