

| ರಾಕೇಶ ಶರ್ಮಾ
ಒಂದು ಪವಿತ್ರ ಉದ್ದೇಶದಿಂದ ಆರಂಭವಾಗಿ, ಗುರಿಯನ್ನು ತಲುಪುತ್ತಿದ್ದ ರೈತರ ಚಳವಳಿ ಏಕೆ ದಾರಿ ತಪ್ಪಿತು? ಮತ್ತು ಅದಕ್ಕೆ ಯಾರು ಹೊಣೆಗಾರರಾಗಿದ್ದಾರೆ? ಎಂಬುದನ್ನು ದೇಶಪ್ರೇಮಿಗಳು ತಿಳಿಯಬೇಕಾದ್ದು ಮುಖ್ಯ. ಹಾಗೆಂದು ಈ ವಿಷಯ/ವಿವಾದ ಕ್ಲಿಷ್ಟಕರವಾದ ಗಣಿತ ಏನಲ್ಲ. ಸಾಮಾನ್ಯಜ್ಞಾನ ಹೊಂದಿರುವ ಯಾರು ಬೇಕಾದರೂ ಇದನ್ನು ವಿಶ್ಲೇಷಿಸಬಹುದು. ಇದಕ್ಕಾಗಿ ಮೊದಲು ಕೃಷಿ ಕಾನೂನುಗಳ ಮೂಲ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕಿದೆ.
ಪ್ರಧಾನಿ ನರೇಂದ್ರ ಮೋದಿ ಕಳೆದ ಏಳು ವರ್ಷದ ಅವಧಿಯಲ್ಲಿ ಅನೇಕ ಬಾರಿ ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ರೈತರ ಕಲ್ಯಾಣದ ಬಗ್ಗೆ ಮಾತನಾಡಿದ್ದಾರೆ. ಮುಖ್ಯವಾಗಿ, ‘ರೈತರ ಆದಾಯವನ್ನು 2022ರ ವೇಳೆಗೆ ದ್ವಿಗುಣಗೊಳಿಸಬೇಕಾಗಿದೆ’ ಎಂದು ಪುನರುಚ್ಚರಿಸಿದ್ದಾರೆ. ಕೃಷಿಕ್ಷೇತ್ರದ ಅಭಿವೃದ್ಧಿ, ರೈತರ ಆದಾಯ ಹೆಚ್ಚಳ ಮಾಡಲು ಕಳೆದ 6-7 ವರ್ಷಗಳಲ್ಲಿ ಸಾಕಷ್ಟು ಚಿಂತನೆ ನಡೆಸಲಾಗಿದೆ ಮತ್ತು ಸಂಬಂಧಪಟ್ಟವರೊಂದಿಗೆ ಕೂಲಂಕಷವಾಗಿ ರ್ಚಚಿಸಿ, ವಿಚಾರ ಮಂಥನ ನಡೆಸಲಾಗಿದೆ. ಆ ಬಳಿಕವೇ ಕೃಷಿ ಮಸೂದೆಯನ್ನು ರೂಪಿಸಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸ ಲಾಯಿತು. ಆದರೆ ಕೃಷಿ ಮಸೂದೆ ಅಂಗೀಕರಿಸಿದ ನಂತರ, ಪಂಜಾಬ್ ರೈತರು ಹೋರಾಟ ಆರಂಭಿಸಿದರು. ಆರಂಭದಲ್ಲಿ ಪಂಜಾಬ್ನ ರಸ್ತೆಗಳು ಹಾಗೂ ರೈಲ್ವೆ ಹಳಿಗಳಲ್ಲಿಯೇ ನಡೆಯುತ್ತಿದ್ದ ಹೋರಾಟ ಕ್ರಮೇಣ ದೇಶದ ಹಲವೆಡೆ ಹರಡಿ, ದೆಹಲಿಯ ಅಂಗಳಕ್ಕೆ ತಲುಪಿತು.
ಈ ಚಳವಳಿಯ ಹಿಂದೆ ಯಾರಿದ್ದಾರೆ ಎಂದು ತಿಳಿಯುವುದು ಬಹಳ ಮುಖ್ಯ. ಸ್ವಯಂಕೃತ ಅಪರಾಧ ಗಳಿಂದ ಅಧಿಕಾರ ಕಳೆದುಕೊಂಡ ಪ್ರತಿಪಕ್ಷಗಳು ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಹೋರಾಟದ ಹಿಂದೆ ಅವಿತು ಕೊಂಡಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್, ಟಿಆರ್ಎಸ್, ಅರವಿಂದ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ, ಅಖಿಲೇಶ ಯಾದವರ ಸಮಾಜವಾದಿ ಪಕ್ಷ, ಫಾರೂಕ್ ಅಬ್ದುಲ್ಲಾರ ನ್ಯಾಷನಲ್ ಕಾನ್ಪರೆನ್ಸ್, ಶರದ ಪವಾರ್ ಅವರ ಎನ್ಸಿಪಿ ಸೇರಿ ಹಲವು ರಾಜಕೀಯ ಪಕ್ಷಗಳಿವೆ. ಅಲ್ಲದೆ, ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಮೇಧಾ ಪಾಟ್ಕರ್, ಸ್ವರಾ ಭಾಸ್ಕರ್, ತುಕ್ಡೆ ತುಕ್ಡೆ ಗ್ಯಾಂಗ್ ಇವರೆಲ್ಲ ಹೇಗಾದರೂ ಮಾಡಿ ಮೋದಿಯವರನ್ನು, ಎನ್ಡಿಎಯನ್ನು ಅಧಿಕಾರದಿಂದ ಹೊರ ಅಟ್ಟಲು ಪಣ ತೊಟ್ಟಿದ್ದಾರೆ. ಇಲ್ಲದಿದ್ದರೆ ರೈತರ ಹೆಸರಿನಲ್ಲಿ ಈ ಬಗೆಯ ಹೋರಾಟ ನಡೆಯುತ್ತಿತ್ತೆ, ಮುಂದುವರಿಯುತ್ತಿತ್ತೆ?
‘ಕಾಯಿದೆ ಅನುಷ್ಠಾನ ನಂತರ ಕನಿಷ್ಠ ಬೆಂಬಲ ಬೆಲೆಯನ್ನು ರದ್ದುಗೊಳಿಸಲಾಗುತ್ತದೆ’ ಎಂಬ ಗೊಂದಲವನ್ನು ಹರಡುವ ಮೂಲಕ ಹೋರಾಟಕ್ಕೆ ಅಡಿಪಾಯ ಹಾಕಲಾಯಿತು. ಆದರೆ, ಹೊಸ ಕಾನೂನಿನಿಂದ ಕನಿಷ್ಠ ಬೆಂಬಲ ಬೆಲೆ ಕೊನೆಗೊಳ್ಳುವುದಿಲ್ಲ ಎಂದು ಸರ್ಕಾರ ಹಲವು ವೇದಿಕೆಗಳ ಮೂಲಕ ಸ್ಪಷ್ಟಪಡಿಸಿದೆ. ಆದರೂ, ಸತ್ಯವನ್ನು ಕೇಳುವ ತಾಳ್ಮೆ ಈ ತಥಾಕಥಿತ ನಾಯಕರಿಗಿಲ್ಲ.
ಆ ಮೇಲೆ ಹೋರಾಟಗಾರರು ಹೊಸ ವರಸೆ ಶುರು ಮಾಡಿದರು. ‘ಗುತ್ತಿಗೆ ಕೃಷಿಯಲ್ಲಿ ರೈತರು ಅವರ ಭೂಮಿ ಕಳೆದುಕೊಳ್ಳುತ್ತಾರೆ’ ಎಂಬ ಸುಳ್ಳನ್ನು ಹರಡಿದರು. ‘ಕಾಂಟ್ರಾಕ್ಟ್ ಫಾರ್ವಿುಗ್ನಿಂದ ರೈತರ ಒಂದಿಚೂ ಭೂಮಿ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಸರ್ಕಾರ ಸ್ಪಷ್ಟಪಡಿಸಿತು.
ಆಗ, ಕೃಷಿ ಉತ್ಪನ್ನ ಮಾರುಕಟ್ಟೆ ಇರುವುದಿಲ್ಲ ಎಂಬ ತಕರಾರು ಬಂತು ಹೋರಾಟಗಾರರಿಂದ. ಅದಕ್ಕೆ ಸರ್ಕಾರ, ‘ಈ ವ್ಯವಸ್ಥೆ ಕೊನೆಗೊಳ್ಳುವುದಿಲ್ಲ ಮತ್ತು ಮಾರುಕಟ್ಟೆಯ ಪರ್ಯಾಯ ವ್ಯವಸ್ಥೆಯನ್ನೂ ಒದಗಿಸಲಾಗುವುದು’ ಎಂದು ಹೇಳಿತು. ಮತ್ತೆ ನೆಪ ಹುಡುಕಲಾಯಿತು.
‘ಹೊಸ ವಿದ್ಯುತ್ ನೀತಿ’ ರೈತರಿಗೆ ಮಾರಕ ಎಂದರು. ಅದಕ್ಕೆ ಹಳೆಯ ವಿದ್ಯತ್ ನೀತಿಯನ್ನೇ ಮುಂದುವರಿಸುವುದಾಗಿ ಹೇಳಿತು ಕೇಂದ್ರ. ಅಲ್ಲದೆ, ಬಿಕ್ಕಟ್ಟು, ವಿವಾದಗಳ ಶಮನಕ್ಕೆ ರೈತರು ದೇಶದ ಯಾವುದೇ ನ್ಯಾಯಾಲಯಕ್ಕೆ ಹೋಗಬಹುದು ಎಂದು ಸರ್ಕಾರ ತಿಳಿಸಿತು. ಇದನ್ನು ಅರಗಿಸಿ ಕೊಳ್ಳಲಾಗದ ವಿರೋಧ ಪಕ್ಷಗಳು ಮೂರೂ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಪಟ್ಟು ಹಿಡಿದವು. ಅದಕ್ಕೆ ಸರ್ಕಾರ ಈ ಕಾನೂನುಗಳಲ್ಲಿ ಇರುವ ತೊಡಕುಗಳು ಏನೆಂದು ಹೇಳಿದರೆ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿತು. ಚಳವಳಿಗಾರರು ಸುಪ್ರೀಂಕೋರ್ಟ್ನ ಸಮಿತಿಯನ್ನೂ ತಿರಸ್ಕರಿಸಿದರು.
ಸರ್ಕಾರ ಅಂತಿಮ ಅಸ್ತ್ರವಾಗಿ ಹೊಸ ಕೃಷಿ ಕಾನೂನುಗಳನ್ನು ಒಂದೂವರೆ ವರ್ಷ ಅಮಾನತ್ತಿನಲ್ಲಿಡುವುದಾಗಿ ಆಶ್ವಾಸನೆ ನೀಡಿತು. ಈ ಅವಧಿಯಲ್ಲಿ ಸಮಿತಿ ರಚಿಸಲಾಗುವುದು, ಕೃಷಿ ಕಾನೂನಿನಿಂದ ರೈತರಿಗೆ ಆಗಿರುವ ನಷ್ಟದ ಅಂದಾಜು ಮಾಡಿ ಅದನ್ನು ಸುಧಾರಿಸುವ ಹಾಗೂ ಸೂಕ್ತ ಪರಿಹಾರ ಕಂಡುಕೊಳ್ಳುವ ಭರವಸೆ ಸಹ ನೀಡಿತು. ಚಳವಳಿಗಾರರ ಉದ್ದೇಶ ಕೇವಲ ಕೃಷಿ ಮಸೂದೆ ವಿರೋಧಿಸುವುದೇ ಆಗಿದ್ದರೆ ಸಮಿತಿ ರಚನೆಗೆ ಸಮ್ಮಿತಿ ನೀಡಿ ತಮ್ಮ ಅಭಿಪ್ರಾಯ ನೀಡುತ್ತಿದ್ದರು. ಆಗ ಜನವರಿ 26ರ ದೆಹಲಿ ಘಟನೆ ನಡೆಯುತ್ತಿರಲಿಲ್ಲ. ಆದರೆ ಇದರ ಹಿಂದಿರುವ ಉದ್ದೇಶವೇ ಬೇರೆಯಾಗಿದೆ. ಕೃಷಿ ಮಸೂದೆ ಜಾರಿಯಾಗದಂತೆ ತಡೆಯುವಲ್ಲಿ ಯಶಸ್ವಿಯಾದರೆ, ಎನ್ಡಿಎ ಸರ್ಕಾರ ರದ್ದುಗೊಳಿಸಿರುವ ಕಲಂ 370ರ ಮರುಸ್ಥಾಪನೆ ಮತ್ತು ಸಿಎಎ, ತ್ರಿವಳಿ ತಲಾಕ್, ಪೌರತ್ವ ಕಾನೂನು ಇತ್ಯಾದಿಗಳನ್ನೂ ರದ್ದುಗೊಳಿಸುವ ಮಾರ್ಗ ಕಂಡುಕೊಳ್ಳಬಹುದು ಎಂಬ ಯೋಚನೆ. ಹಾಗಾಗಿಯೇ ವಿರೋಧ ಪಕ್ಷಗಳು ಕೃಷಿ ಮಸೂದೆ ವಿರುದ್ಧ ರೈತರನ್ನು ಪ್ರಚೋದಿಸಿ, ಹೋರಾಟವನ್ನು ಮುಂದುವರಿಸಿವೆ.