

"ಹೆಡ್ ಬುಷ್' ಚಿತ್ರದಲ್ಲಿ ಧನಂಜಯ್, ಮಾಜಿ ಡಾನ್ ಜಯರಾಜ್ ಅವರ ಪಾತ್ರ ಮಾಡುತ್ತಿದ್ದಾರೆ ಎಂಬ ವಿಷಯ ಎರಡೂವರೆ ವರ್ಷಗಳ ಹಿಂದೆಯೇ ಸುದ್ದಿಯಾಗಿತ್ತು. ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಗಿದಿದೆ. ಇಷ್ಟು ದಿನ ಸುಮ್ಮನಿದ್ದ ಜಯರಾಜ್ ಅವರ ಮಗ ಹಾಗೂ ನಟ ಅಜಿತ್ ಜಯರಾಜ್, ತಮ್ಮ ಅನುಮತಿ ಪಡೆದಿಲ್ಲವಾದ್ದರಿಂದ ಚಿತ್ರ ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲ ಎಂದಿದ್ದಾರೆ.
ಅಷ್ಟೇ ಅಲ್ಲ, ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಿದ್ದಾರೆ. ಈ ಬಗ್ಗೆ ಮಾತನಾಡುವ ಧನಂಜಯ್, "ಸಿನಿಮಾ ಶುರುವಾದಾಗ ಅಜಿತ್ ವಿಶ್ ಮಾಡಿದ್ದರು. ಈ ಪಾತ್ರವನ್ನು ನೀವು ಮಾಡುತ್ತಿರುವುದು ವೈಯಕ್ತಿಕವಾಗಿ ನನಗೆ ಖುಷಿ ಇದೆ ಎಂದು ಹೇಳಿದ್ದರು. ಏನೂ ಸಮಸ್ಯೆ ಇರಲಿಲ್ಲ. ಸಡನ್ ಆಗಿ ಯಾಕೆ ಹೋಗಿ ಅವರು ದೂರು ಕೊಟ್ಟರು ಎಂದು ಗೊತ್ತಾಗಲಿಲ್ಲ. ಯಾರಾದರೂ ಏನಾದರೂ ಹೇಳಿಕೊಟ್ಟರಾ ಗೊತ್ತಿಲ್ಲ. "ಹೆಡ್ ಬುಶ್' ಚಿತ್ರಕ್ಕೆ ಹಣ, ಶ್ರಮ ಎರಡೂ ಹಾಕಿದ್ದೇನೆ. ಸಿನಿಮಾ ಮುಗಿಯುವವರೆಗೂ ಸುಮ್ಮನಿದ್ದು, ಈ ರೀತಿ ಸಮಸ್ಯೆ ಬಂದಿರುವುದು ಯಾಕೆ ಗೊತ್ತಿಲ್ಲ. ಶ್ರೀಧರ್ ಅವರ ಪುಸ್ತಕವನ್ನು ಆಧರಿಸಿ ಚಿತ್ರ ಮಾಡುತ್ತಿದ್ದೇವೆ. "ದಾದಾ ಗಿರಿಯ ದಿನಗಳು' ಪುಸ್ತಕ ಆಧರಿಸಿ ಸ್ಕ್ರಿಪ್ಟ್ ಬರೆದುಕೊಟ್ಟಿದ್ದಾರೆ. ಆ ಪುಸ್ತಕ 20 ವರ್ಷಗಳಿಂದ ಇದೆ.ಶ್ರೀಧರ್ ಅವರಿಂದ ಹಕ್ಕುಗಳನ್ನು ಪಡೆದು ಚಿತ್ರ ಮಾಡು ತಿದ್ದೇನೆ. ಏನೇ ಸಮಸ್ಯೆ ಇದ್ದರೂ ಶ್ರೀಧರ್ ಅವರ ಜತೆಗೆ ಪರಿಹರಿಸಿಕೊಳ್ಳಬೇಕು' ಎನ್ನುತ್ತಾರೆ.