ಆಗೋದೆಲ್ಲ ಒಳ್ಳೇದಕ್ಕೆ... ನಿರ್ದೇಶನಕ್ಕೆ ಅಪೂರ್ವ ತಯಾರಿ

page 10 1
Published on

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ‘ವಿಕ್ಟರಿ’ ಬೆಡಗಿ ಅಪೂರ್ವ ನಟನೆಯ ‘ಕೃಷ್ಣ ಟಾಕೀಸ್’ ಇಷ್ಟೊತ್ತಿಗಾಗಲೇ ಬಿಡುಗಡೆಯಾಗಿರುತ್ತಿತ್ತು. ಆದರೆ, ಲಾಕ್​ಡೌನ್ ಅದ್ಯಾವುದಕ್ಕೂ ಅವಕಾಶ ಮಾಡಿಕೊಡಲಿಲ್ಲ. ಹಾಗಂತ ಆ ಬಗ್ಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎನ್ನುವ ಅಪೂರ್ವ ‘ಆಗೋದೆಲ್ಲ ಒಳ್ಳೇದಕ್ಕೆ ...’ ಎಂದು ಹೇಳಿಕೊಳ್ಳುತ್ತಾರೆ.

‘ಎಂದಿನಂತೆ ಸಿನಿಮಾ ಶೂಟಿಂಗ್​ಗೆ ಸಿದ್ಧವಾಗುತ್ತಿದ್ದೆ. ದಿಢೀರ್ ಎಂದು ಲಾಕ್​ಡೌನ್ ಘೋಷಣೆಯಾಯಿತು. ಈ ಅನಿರೀಕ್ಷಿತ ನಿರ್ಧಾರ ಕಂಡು, ಇನ್ನೇನು ಎರಡು ದಿನ ಆದಮೇಲೆ ಸರಿಹೋಗಬಹುದು ಎಂದುಕೊಂಡಿದ್ದೆ. ಆದರೆ, ದಿನೇದಿನೆ ಪರಿಸ್ಥಿತಿ ಬಿಗಡಾಯಿಸುತ್ತಲೇ ಹೋಯಿತು. ನಾನು ಮನೆಯಲ್ಲಿಯೇ ಕುಟುಂಬದೊಟ್ಟಿಗೆ ಕಾಲ ಕಳೆಯುತ್ತಿದ್ದೆ. ಮನೆಯಿಂದ ಆಚೆ ಬಂದು, ನಮ್ಮದೆ ಆದ ತಂಡ ಕಟ್ಟಿಕೊಂಡು ಊಟ, ದಿನಸಿ ಪದಾರ್ಥಗಳನ್ನು ವಿತರಣೆ ಮಾಡಿದ್ದೇವೆ. ಈಗ ಆ ಸ್ಥಿತಿ ಮತ್ತಷ್ಟು ಕರಾಳವಾಗಿದೆ. ಸಿನಿಮಾ ಶೂಟಿಂಗ್ ದೂರದ ಮಾತು. ಈ ವರ್ಷ ನಾನು ನಟಿಸಿದ ಸಿನಿಮಾ ತೆರೆಕಾಣಲಿದೆಯೇ ಎಂಬ ಅನುಮಾನ ನನ್ನನ್ನೇ ಕಾಡುತ್ತಿದೆ’ ಎನ್ನುತ್ತಾರೆ ಅಪೂರ್ವ. ಈ ಲಾಕ್​ಡೌನ್ ಅವಧಿಯನ್ನು ಒಂದಷ್ಟು ಓದು ಮತ್ತು ಕಥೆ ಬರೆಯುವುದಕ್ಕೆ ಮೀಸಲಿಟ್ಟು, ಅರ್ಥಪೂರ್ಣವಾಗಿ ಕಳೆಯುತ್ತಿದ್ದಾರಂತೆ. ಈ ಮೂರು ತಿಂಗಳ ಅವಧಿಯಲ್ಲಿ ತಂಡದ ಜತೆ ಸೇರಿ ಒಂದಷ್ಟು ಕಥೆಗಳನ್ನು ಬರೆದಿರುವ ಅಪೂರ್ವ, ಮುಂದಿನ ದಿನಗಳಲ್ಲಿ ನಿರ್ದೇಶನದ ಪ್ಲಾ್ಯನ್ ಹಾಕಿದ್ದಾರೆ. ‘ಈ ಸಮಯದಲ್ಲಿ ಬೇರೆ ಕೆಲಸ ಇಲ್ಲ. ಕಥೆ ಬರೆದರೆ, ಮುಂದೊಂದಿನ ಸಿನಿಮಾ ಮಾಡಬಹುದು. ಹಾಗಾಗಿ ಈಗಿಂದಲೇ ನಿರ್ದೇಶನಕ್ಕೆ ಸಿದ್ಧತೆ ನಡೆಸಿದ್ದೇನೆ’ ಎನ್ನುತ್ತಾರೆ.

ಇನ್ನುಳಿದಂತೆ ಪರಭಾಷೆಗಳಿಂದಲೂ ಒಂದಷ್ಟು ಅವಕಾಶಗಳು ಅಪೂರ್ವಗೆ ಬರುತ್ತಿವೆಯಂತೆ. ಜತೆಗೆ ಕನ್ನಡದಲ್ಲೂ ಲಾಕ್​ಡೌನ್ ಅವಧಿಯಲ್ಲಿ ಮೂರ್ನಾಲ್ಕು ಕಥೆಗಳನ್ನು ಕೇಳಿದ್ದಾರೆ. ಅಷ್ಟೇ ಅಲ್ಲ, ವೆಬ್ ಸಿರೀಸ್​ನಲ್ಲಿ ನಟಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ. ಜತೆಗೆ ಕನ್ನಡದಲ್ಲಿ ನಿರ್ವಣವಾಗಲಿರುವ ಬಿಗ್ ಬಜೆಟ್ ಸಿನಿಮಾವೊಂದರಲ್ಲಿ ಅಪೂರ್ವ ನಟಿಸುತ್ತಿದ್ದಾರೆ. ಆ ಸಿನಿಮಾ ಮುಹೂರ್ತ ಮಾಡಿ, ಅಧಿಕೃತವಾಗಿ ಘೋಷಣೆ ಮಾಡಬೇಕೆನ್ನುವಷ್ಟರಲ್ಲಿ ಲಾಕ್​ಡೌನ್ ಆಯಿತು. ಹಾಗಾಗಿ ಆ ಸಿನಿಮಾ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳುತ್ತಾರವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net