

Sridevi : ಬಾಲಿವುಡ್ ಚಿತ್ರರಂಗದಲ್ಲಿ ಲೇಡಿ ಸೂಪರ್ಸ್ಟಾರ್ ಎಂಬ ಸ್ಥಾನಮಾನ ಗಳಿಸಿದ ಮೊದಲ ನಟಿ ಎಂದರೆ ಅದು ಶ್ರೀದೇವಿ. ಭಾರತದ ಚಿತ್ರರಂಗದಲ್ಲೇ ತಾರೆಯಂತೆ ಕಂಗೊಳಿಸಿದ ಶ್ರೀದೇವಿ, ಅಕಾಲಿಕವಾಗಿ ಮೃತಪಟ್ಟ ಸುದ್ದಿ ಇಡೀ ಸಿನಿಮಾರಂಗವನ್ನೇ ಆಘಾತಗೊಳಿಸಿತು. ಶ್ರೀದೇವಿ ಅವರು 2018, ಫೆಬ್ರವರಿ 24ರಂದು ನಿಧನರಾದರು. ಅವರ ಸಾವಿನ ಬೆನ್ನಲ್ಲೇ ಅನೇಕ ವದಂತಿಗಳು ಹಬ್ಬಿದ್ದವು. ಇಂದಿಗೂ ಶ್ರೀದೇವಿ ಸಾವಿನ ಬಗ್ಗೆ ಅನುಮಾನಗಳಿದ್ದು, ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಇದೀಗ ಅವರ ಮರಣದ ಬಗೆಗಿನ ಭವಿಷ್ಯವಾಣಿಯು ಎಲ್ಲರ ಗಮನ ಸೆಳೆಯುತ್ತಿದೆ.
ಸಂಬಂಧಿಕರೊಬ್ಬರ ಮದುವೆಯಲ್ಲಿ ಪಾಲ್ಗೊಳ್ಳಲು ಶ್ರೀದೇವಿ ದುಬೈಗೆ ಬಂದಿದ್ದರು. ಅವರು ತಂಗಿದ್ದ ಹೋಟೆಲ್ ಕೋಣೆಯ ಸ್ನಾನದ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ಶ್ರೀದೇವಿ ಮೃತದೇಹ ಪತ್ತೆಯಾಯಿತು. ಆರಂಭದಲ್ಲಿ, ಸಾವಿಗೆ ಕಾರಣ ಹೃದಯಾಘಾತ ಎಂದು ವರದಿಯಾಗಿತ್ತು. ಆದರೆ, ನಂತರ ಅದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಲಾಯಿತು.
ನಟಿ ಶ್ರೀದೇವಿ ಪ್ರಜ್ಞೆ ತಪ್ಪಿ ಸ್ನಾನದ ತೊಟ್ಟಿಗೆ ಬಿದ್ದು ತಲೆಗೆ ಗಂಭೀರ ಗಾಯಗಳಾಗಿವೆ ಎಂಬ ವರದಿಗಳು ಹೊರಬಿದ್ದವು. ಆದಾಗ್ಯೂ, 400 ಕೋಟಿ ರೂಪಾಯಿಗಳ ವಿಮಾ ಹಣಕ್ಕಾಗಿ ಶ್ರೀದೇವಿಯನ್ನು ಕೊಲ್ಲಲಾಗಿದೆ ಎಂಬ ವದಂತಿಗಳು ಇಂದಿಗೂ ಹರಡುತ್ತಿವೆ. ಆದರೆ, ಶ್ರೀದೇವಿಯವರ ಪತಿ ಬೋನಿ ಕಪೂರ್ ಈ ಹೇಳಿಕೆಗಳನ್ನು ಬಲವಾಗಿ ವಿರೋಧಿಸಿದ್ದಾರೆ. ಈ ವಿಚಾರವಾಗಿ ಬೋನಿ ಕಪೂರ್ ಅವರ ಸ್ಪಷ್ಟನೆ ಏನೆಂದರೆ, ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದ ಶ್ರೀದೇವಿಗೆ ಆಗಾಗ್ಗೆ ತಲೆತಿರುಗುವಿಕೆ ಸಂಭವಿಸುತ್ತಿತ್ತು. ಅನೇಕ ಬಾರಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದಿದ್ದರು.
ಇದೀಗ ಶ್ರೀದೇವಿ ಸಾವಿಗೆ ಸಂಬಂಧಿಸಿದ ಜ್ಯೋತಿಷ್ಯ ವಾದಗಳು ಗಮನ ಸೆಳೆಯುತ್ತಿವೆ. ಶ್ರೀದೇವಿ ಅವರು 1963, ಆಗಸ್ಟ್ 13ರಂದು ಜನಿಸಿದರು. ಶ್ರೀದೇವಿಯವರ ಸಂಖ್ಯಾಶಾಸ್ತ್ರದ ಸಂಖ್ಯೆ ನಾಲ್ಕು. ಈ ಸಂಖ್ಯೆಯನ್ನು ಹೊಂದಿರುವ ಜನರ ಸಾವು ಅನಿರೀಕ್ಷಿತವಾಗಿರುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಅನಿರೀಕ್ಷಿತ ಸಾವು, ಆಕಸ್ಮಿಕ ಸಾವು ಇತ್ಯಾದಿಗಳು ಅವರಿಗೆ ಸಂಭವಿಸಬಹುದು. ಸಾವು ಹೆಚ್ಚಾಗಿ ನಿಗೂಢವಾಗಿರುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ ಎಂಬ ಹೇಳಿಕೆಗಳೂ ಇವೆ. ಹೀಗಾಗಿ ಈ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ.
ಅಂದಹಾಗೆ, 1990ರ ದಶಕದವರೆಗೆ ಬಾಲಿವುಡ್ನ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದ ಶ್ರೀದೇವಿ 2000ದ ದಶಕದಲ್ಲಿ ಹೆಚ್ಚು ಕೆಲಸ ಮಾಡಲಿಲ್ಲ. 2012 ರಲ್ಲಿ ಇಂಗ್ಲಿಷ್ ವಿಂಗ್ಲಿಷ್ ಸಿನಿಮಾದೊಂದಿಗೆ ಮರಳಿದರು. ಈ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಶ್ರೀದೇವಿ ಅವರು ತಮ್ಮ ನಿಧನಕ್ಕೂ ಮುಂಚೆ ನಟಿಸಿದ ಕೊನೆಯ ಚಿತ್ರ ಮಾಮ್. ಇದು ಕೂಡ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. (ಏಜೆನ್ಸೀಸ್)