

ಬೆಂಗಳೂರು: ‘ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ಸ್ಲಿಮ್ ಆಗಿದ್ದ ಸುದೀಪ್, ಈಗ ಸ್ವಲ್ಪ ತೂಕ ಹೆಚ್ಚಿಸಿಕೊಂಡಿದ್ದಾರೆ. ಇತ್ತೀಚೆಗೆ, ಪ್ರದೀಪ್ ಅಭಿನಯದ ‘ಯಲ್ಲೋ ಬೋರ್ಡ್’ನ ಪ್ರೀ-ರಿಲೀಸ್ ಇವೆಂಟ್ಗೆ ಬಂದಿದ್ದ ಸಂದರ್ಭದಲ್ಲಿ ಮೈಕೈ ತುಂಬಿಸಿಕೊಂಡಂತೆ ಕಾಣುತ್ತಿದ್ದ ಸುದೀಪ್, ಆ ನಂತರ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಸಹ ಹಾಕಿದ್ದಾರೆ. ‘ತೂಕ ಕಳೆದುಕೊಳ್ಳುವುದರಿಂದ, ತೂಕ ಹೆಚ್ಚಿಸಿಕೊಳ್ಳುವವರೆಗೂ ... ಒಬ್ಬ ನಿರ್ದೇಶಕರ ಕನಸಿಗಾಗಿ ... ತೆಳ್ಳಗಾಗಿದ್ದ ‘ವಿಕ್ರಾಂತ್ ರೋಣ ಈಗ ಹೊಸ ???’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಹೊಸ ಚಿತ್ರ ಯಾವುದು ಎಂಬ ವಿಷಯವನ್ನು ಮುಚ್ಚಿಟ್ಟಿದ್ದಾರೆ.
ಇದಕ್ಕೂ ಮುನ್ನ ಸುದೀಪ್ ಕೆಲವು ದಿನಗಳ ಹಿಂದೆ ಸುದೀಪ್, ‘ವಿಕ್ರಾಂತ್ ರೋಣ’ ಬಗ್ಗೆ ಬರೆದುಕೊಂಡಿದ್ದರು. ಆ ಚಿತ್ರದ 3ಡಿ ವರ್ಷನ್ ಬಹಳ ಅದ್ಭುತವಾಗಿ ಮೂಡಿ ಬಂದಿದೆ ಎಂದು ಹೇಳಿದ್ದರು. ಅದರ ಜತೆಗೆ, ಸದ್ಯದಲ್ಲೇ ಅನೂಪ್ ಭಂಡಾರಿ ಜತೆಗೆ ತಮ್ಮ ಹೊಸ ಚಿತ್ರದ ಘೋಷಣೆಯನ್ನು ನಿರೀಕ್ಷಿಸಿ ಎಂದು ಹೇಳಿದ್ದರು. ಯಾವಾಗ ಸುದೀಪ್ ತಮ್ಮ ಮುಂದಿನ ಚಿತ್ರ ಅನೂಪ್ ಭಂಡಾರಿ ಜತೆಗೆ ಎಂದು ಹೇಳಿದರೋ, ಆಗ ಆ ಚಿತ್ರ ಯಾವುದಿರಬಹುದು ಎಂಬ ಲೆಕ್ಕಾಚಾರ ಅಭಿಮಾನಿಗಳ ವಲಯದಲ್ಲಿ ಶುರುವಾಯಿತು. ‘ವಿಕ್ರಾಂತ್ ರೋಣ’ಗೂ ಮುನ್ನ ಅನೂಪ್, ಸುದೀಪ್ ಜತೆಗೆ ‘ಬಿಲ್ಲ ರಂಗ ಭಾಷಾ’ ಎಂಬ ಚಿತ್ರ ಮಾಡುವುದಾಗಿ ಹೇಳಿದ್ದರು. ಕೊನೆಗೆ ಕಾರಣಾಂತರಗಳಿಂದ ಅದನ್ನು ಬಿಟ್ಟು, ‘ವಿಕ್ರಾಂತ್ ರೋಣ’ ಶುರು ಮಾಡಿದ್ದರು. ಚಿತ್ರ ಅರ್ಧ ಮುಗಿದ ಮೇಲೆ ‘ಅಶ್ವತ್ತಾಮ’ ಎಂಬ ಇನ್ನೊಂದು ಚಿತ್ರವನ್ನು ಸುದೀಪ್ ಅಭಿನಯದಲ್ಲಿ ನಿರ್ದೇಶಿಸುವುದಾಗಿ ಘೋಷಿಸಿದ್ದಾರೆ.
ತಮ್ಮ ಮುಂದಿನ ಚಿತ್ರ ಅನೂಪ್ ಭಂಡಾರಿ ಜತೆಗೆ ಎಂದು ಸುದೀಪ್ ಅವರೇ ಘೋಷಿಸಿರುವುದರಿಂದ, ‘ಬಿಲ್ಲ ರಂಗ ಭಾಷಾ’ ಶುರುವಾಗುತ್ತದಾ? ಅಥವಾ ‘ಅಶ್ವತ್ಥಾಮ’ ಶುರುವಾಗುತ್ತದಾ? ಎಂಬ ಕುತೂಹಲ ಅಭಿಮಾನಿಗಳ ವಲಯದಲ್ಲಿ ಹೆಚ್ಚಾಗಿದೆ. ಆದರೆ, ಸುದೀಪ್ ಆಗಲೀ, ಅನೂಪ್ ಆಗಲೀ ಯಾವ ಚಿತ್ರ ಎಂಬ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ. ಚಿತ್ರ ಯಾವುದೇ ಇರಲಿ, ‘ವಿಕ್ರಾಂತ್ ರೋಣ’ ನಂತರ ಸುದೀಪ್ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿರುವುದೇ ಅಭಿಮಾನಿಗಳಿಗೆ ಖುಷಿ ತಂದಿದೆ. ಇನ್ನು, ಚಿತ್ರ ಯಾವುದು ಎಂಬ ಪ್ರಶ್ನೆ? ಅದಕ್ಕೂ ಸದ್ಯದಲ್ಲೇ ಉತ್ತರ ಸಿಗಲಿದೆ.