

ಭಾರತೀಯ ಸಿನಿಮಾ ರಂಗದಲ್ಲಿ ಮದುವೆ ಸೀಸನ್ ಪ್ರಾರಂಭವಾಗಿದೆಯಾ? ಹೀಗೊಂದು ಪ್ರಶ್ನೆ ಮೂಡಲು ಕಾರಣ, ಕೆಲ ದಿನಗಳಿಂದೀಚೆಗೆ ಕನ್ನಡ, ತಮಿಳು, ತೆಲುಗು ಸೇರಿ ಬೇರೆ ಬೇರೆ ಚಿತ್ರರಂಗಗಳಲ್ಲಿ ಸಿನಿಮಾಗಳ ಜತೆ ಜತೆಗೆ ತಾರೆಯರ ಮದುವೆ, ನಿಶ್ಚಿತಾರ್ಥದ ಸುದ್ದಿಗಳೂ ಸದ್ದು ಮಾಡುತ್ತಿವೆ. ಇದೇ ನ. 17ರಂದು ನಟ ಡಾಲಿ ಧನಂಜಯ, ಡಾ. ಧನ್ಯತಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂದೇ ನಟಿ ಸಿರಿ ಪ್ರಹ್ಲಾದ್ ಮತ್ತು ನಟ ಮಧುಸೂದನ್ ಗೋವಿಂದ್ ಸಪ್ತಪದಿ ತುಳಿದಿದ್ದರು. ಅದಕ್ಕೂ ಮುನ್ನ ಅ. 26ರಂದು ‘ಲವ್ ಮಾಕ್ಟೇಲ್ 2’ ನಟಿ ರೇಚೆಲ್ ಡೇವಿಡ್, ಪ್ರಿಯಕರ ಆ್ಯಂಟೊ ಫಿಲಿಪ್ ಜತೆ ಚರ್ಚ್ ವೆಡ್ಡಿಂಗ್ ಮಾಡಿಕೊಂಡಿದ್ದರು. ಇದೇ ಸೋಮವಾರ (ನ. 25) ನಟಿ ಅಕ್ಷಿತಾ ಬೋಪಯ್ಯ, ಕಾರ್ಯಕಾರಿ ನಿರ್ಮಾಪಕ ಪ್ರೀತಂ ಜತೆ ಕೊಡವ ಸಂಪ್ರದಾಯದಲ್ಲಿ ಮದುವೆಯಾಗಿದ್ದರು. ಬಾಲಿವುಡ್ ನಟ ಆದಾರ್ ಜೈನ್ ಅವರು ಬಾಲ್ಯದ ಗೆಳತಿ ಅಲೇಖಾ ಅಡ್ವಾನಿ ಜತೆ ಗುರುವಾರ ಹಸೆಮಣೆ ಏರಿದ್ದಾರೆ.
ಜೈನಬ್ ಬಂಧನದಲ್ಲಿ ಅಖಿಲ್ : ಅಕ್ಕಿನೇನಿ ಕುಟುಂಬದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದ್ದು, ಡಬಲ್ ಧಮಾಕಾದ ಖುಷಿಯಲ್ಲಿದೆ. ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗಚೈತನ್ಯ ಹಾಗೂ ನಟಿ ಶೋಭಿತಾ ಧುಲಿಪಾಲ ಮದುವೆ ಡಿ.4ರಂದು ನಡೆಯಲಿದ್ದು, ಅದರ ಸಿದ್ಧತೆಯಲ್ಲಿದ್ದಾರೆ. ಈ ಮಧ್ಯೆಯೇ, ನಾಗಾರ್ಜುನ್ ಕಿರಿಯ ಪುತ್ರ ಅಕ್ಕಿನೇನಿ ಅಖಿಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತೆಲುಗಿನ ‘ಅಖಿಲ್’, ‘ಹೆಲ್ಲೋ’, ‘ಏಜೆಂಟ್’ ಸಿನಿಮಾಗಳಲ್ಲಿ ನಟಿಸಿರುವ 30 ವರ್ಷದ ಅಖಿಲ್, ಕಲಾವಿದೆ ಜೈನಾಬ್ ರೌದ್ಜೀ ಜತೆ ಮಂಗಳವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ನಾಗಾರ್ಜುನ್ ಜಾಲತಾಣದ ಮೂಲಕ ೋಷಿಸಿದ್ದಾರೆ. ಬಳಿಕ ಜೈನಾಬ್ ಜತೆಗಿರುವ ೆಟೋ ಹಂಚಿಕೊಂಡು ಅಖಿಲ್ ಕೂಡ ಸಂಭ್ರಮಿಸಿದ್ದಾರೆ. ಕುಂಚ ಕಲಾವಿದೆಯಾಗಿರುವ ಜೈನಾಬ್ ಪೇಂಟಿಂಗ್‌ಗಳು ಭಾರತ ಸೇರಿ ಲಂಡನ್, ದುಬೈ ಹಲವೆಡೆ ಪ್ರದರ್ಶನ ಕಂಡಿವೆ. 2025ರಲ್ಲಿ ಇವರ ಮದುವೆ ನೆರವೇರಲಿದೆ. ಅಖಿಲ್ 2017ರಲ್ಲಿ ಉದ್ಯಮಿ, ಡಿಸೈನರ್ ಶ್ರೀಯಾ ಭೂಪಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ ಮನಸ್ತಾಪದಿಂದಾಗಿ ಇಬ್ಬರು ಬೇರೆಯಾಗಿದ್ದರು. ಅಖಿಲ್ ‘ಏಜೆಂಟ್’ ಬಳಿಕ ಯಾವುದೇ ಸಿನಿಮಾದಲ್ಲಿ ನಟಿಸುತ್ತಿಲ್ಲ.
ಸಿದ್ದಾರ್ಥ್- ಅದಿತಿ, ಮತ್ತೊಮ್ಮೆ ಮದುವೆ!: ಬಹುಭಾಷಾ ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಕಳೆದ ಸೆಪ್ಟೆಂಬರ್ 16ರಂದು 400 ವರ್ಷಗಳ ಐತಿಹಾಸಿಕ ವನಪಾರ್ತಿ ದೇವಸ್ಥಾನದಲ್ಲಿ ಹಿಂದು ಸಂಪ್ರದಾಯದಂತೆ ಮದುವೆಯಾಗಿದ್ದರು. ಇದೀಗ ಈ ತಾರಾಜೋಡಿ ಮತ್ತೊಮ್ಮೆ ಮದುವೆಯಾಗಿದೆ. ರಾಜಾಸ್ತಾನದ ಬಿಷಂಗಢದ ಅಲಿಲಾ ಕೋಟೆಯಲ್ಲಿ ಹಿಂದು ಸಂಪ್ರದಾಯದಂತೆ ಅದ್ದೂರಿಯಾಗಿ ಮದುವೆಯಾಗಿದ್ದು, ೆಟೋಗಳನ್ನು ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದಿತಿ, ಕೆಂಪು ಲೆಹೆಂಗಾದಲ್ಲಿ ಮಿಂಚಿದರೆ, ಸಿದ್ಧಾರ್ಥ್ ಶೇರ್ವಾನಿ ತೊಟ್ಟಿದ್ದಾರೆ. ಸಿದ್ದಾರ್ಥ್ ಸದ್ಯ ‘ಮಿಸ್ ಯೂ’, ‘ಇಂಡಿಯನ್-3’ ಚಿತ್ರಗಳಲ್ಲಿ ಹಾಗೂ ಅದಿತಿ, ‘ಗಾಂಧಿ ಟಾಕ್ಸ್’ನಲ್ಲಿ ನಟಿಸುತ್ತಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟ ಸುಬ್ಬರಾಜು: ತೆಲುಗಿನ ‘ಪೊಕಿರಿ’, ‘ಆರ್ಯ’, ‘ಬಿಲ್ಲಾ’, ‘ಬಾಹುಬಲಿ: ದ ಕನ್‌ಕ್ಲೂಷನ್’ ಖ್ಯಾತಿಯ ನಟ ಸುಬ್ಬರಾಜು ತಮ್ಮ 47ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟಿದ್ದಾರೆ. ಮದುವೆಯ ೆಟೋಗಳನ್ನು ಹಂಚಿಕೊಂಡು ಸಂಭ್ರಮಿಸಿರುವ ಅವರು, ಪತ್ನಿ ಕುರಿತಂತೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಸುಬ್ಬರಾಜುಗೆ ಅಭಿಮಾನಿಗಳು ಸೇರಿದಂತೆ ತೆಲುಗು ಚಿತ್ರರಂಗದ ನಟರು, ಗಣ್ಯರು ಶುಭ ಹಾರೈಸಿದ್ದಾರೆ.
ಪ್ರೀತಿ ಕನ್ಫರ್ಮ್ ಮಾಡಿದ ಕೀರ್ತಿ: ರಾಷ್ಟ್ರಪ್ರಶಸ್ತಿ ವಿಜೇತ ‘ಮಹಾನಟಿ’ ಕೀರ್ತಿ ಸುರೇಶ್ ಬಹುಕಾಲದ ಗೆಳೆಯ, ಉದ್ಯಮಿ ಆ್ಯಂಟೋನಿ ತಟ್ಟಿಲ್ ಜತೆ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಈ ಬಗ್ಗೆ ಕೀರ್ತಿ ಮೌನವಹಿಸಿದ್ದರು. ಇದೀಗ, ಆ್ಯಂಟೋನಿ ಜತೆಗಿರುವ ೆಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಕೀರ್ತಿ ತಮ್ಮ ಪ್ರೀತಿಯನ್ನು ಕನ್ಫರ್ಮ್ ಮಾಡಿದ್ದಾರೆ. ಇದೇ ಡಿ. 11, 12ರಂದು ಗೋವಾದಲ್ಲಿ ಇವರ ಮದುವೆ ನಡೆಯಲಿದೆ ಎನ್ನಲಾಗಿದೆ. ಸದ್ಯ ಕೀರ್ತಿ ‘ರಿವಾಲ್ವರ್ ರೀಟಾ’, ‘ಕನ್ನಿವೇದಿ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.