vrittha movie review: ‘ವೃತ್ತ’ದೊಳಗೆ ಸಿದ್ದಾರ್ಥನ ಒಂಟಿ ಪಯಣ

vritha
Published on

ಚಿತ್ರ: ‘ವೃತ್ತ’

ನಿರ್ದೇಶನ: ಲಿಖಿತ್‌ಕುಮಾರ್

ನಿರ್ಮಾಣ: ಶಿವಕುಮಾರ್

ತಾರಾಗಣ: ಮಾಹಿರ್ ಮೊಹಿಯುದ್ದೀನ್, ಹರಿಣಿ ಸುಂದರ್‌ರಾಜನ್, ಮಾ.ಅನುರಾಗ್, ಚೈತ್ರಾ ಜೆ. ಆಚಾರ್ ಮತ್ತಿತರರು.

ಶಿವ ಸ್ಥಾವರಮಠ

ಮನಸ್ಸು ವಿಚಲಿತಗೊಂಡಾಗ ನಾವು ಯಾರ ಮಾತೂ ಕೇಳುವುದಿಲ್ಲ. ಆ ಸಮಯದಲ್ಲಿ ಸಂತೈಸುವ ತಾಯಿ, ಭರವಸೆ ನೀಡುವ ಪ್ರೇಯಸಿ, ಛೇಡಿಸುವ ತಂಗಿಯ ಮಾತುಗಳು ಕೂಡ ಕಿರಿಕಿರಿ ಅನಿಸಿಬಿಡುತ್ತವೆ. ಆಗ ಒಂಟಿಯಾಗಿ ದೂರ ಪ್ರಯಾಣಿಸಬೇಕು ಎಂದೆನಿಸಿಬಿಡುತ್ತದೆ. ಈ ಪ್ರಯಾಣ ನಮ್ಮನ್ನು ಮತ್ತೊಂದು ಸಮಸ್ಯೆಯ ಸುಳಿಗೆ ಸಿಲುಕಿಸುತ್ತದೆ ಎಂಬುದನ್ನು ‘ವೃತ್ತ’ದ ಮೂಲಕ ನಿರ್ದೇಶಕ ಲಿಖಿತ್ ಕುಮಾರ್ ನಿರೂಪಿಸಿದ್ದಾರೆ. ಈ ಮಿಸ್ಟರಿ-ಥ್ರಿಲ್ಲರ್ ಕಥೆಯಲ್ಲಿ ಕುತೂಹಲಕಾರಿ ಕಾಡಿನ ಜರ್ನಿ ಕಾಣಬಹುದು.

ಆತ ಸಿದ್ದಾರ್ಥ್ (ಮಾಹಿರ್ ಮೊಹಿಯುದ್ದೀನ್) 30 ಲಕ್ಷ ರೂ. ಸಾಲ ಮಾಡಿಕೊಂಡು, ವಾಪಸ್ ನೀಡಲಾಗದೆ ಸಾಲದ ಸುಳಿಗೆ ಸಿಲುಕಿರುತ್ತಾನೆ. ಹೇಗಾದರೂ ಮಾಡಿ ಸಾಲಮುಕ್ತನಾಗಬೇಕು ಎಂಬುದೊಂದೇ ಆತನ ಹಠ. ಅದರ ಮಧ್ಯೆ, ಪ್ರೇಯಸಿ ಬಿಟ್ಟು ಹೋಗಿರುವ ನೋವಿನ ಯಾತನೆ ಜತೆಗೆ ಇಡೀ ರಾತ್ರಿ ಕಾಡುವ ತಾಯಿ ಜತೆಗಿನ ಅಸ್ಪಷ್ಟವಾದ ಕನಸು. ಹೀಗೆ ನಾನಾ ವಿಚಾರಗಳಿಂದ ಸಿದ್ದಾರ್ಥ್ ಮಾನಸಿಕವಾಗಿ ಸಮಸ್ಯೆಯ ‘ವೃತ್ತ’ದೊಳಗೆ ಸಿಲುಕಿಕೊಂಡಿರುತ್ತಾನೆ. ಇದೆಲ್ಲದ್ದಕ್ಕೆ ಉತ್ತರ ಕಾಣಬೇಕು ಎಂದು ಪುಷ್ಪಗಿರಿಗೆ ಪ್ರಯಾಣ ಬೆಳೆಸುತ್ತಾನೆ. ಮುಂದೆ ನಡೆಯುವ ಘಟನೆಗಳೇ ಚಿತ್ರದ ಕೌತುಕ.

ಲಿಖಿತ್ ಕುಮಾರ್ ಮೊದಲ ಪ್ರಯತ್ನದಲ್ಲಿ ಕುತೂಹಲಕಾರಿ ಕಥೆ ಹೇಳಿ, ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಇಡೀ ಕಥೆಯಲ್ಲಿ ಸೀಟಿನಂಚಿ ತುದಿಯಲ್ಲಿ ಕೂರುವ ಕುತೂಹಲವಿದೆ. ಮೊದಲರ್ಧದಲ್ಲಿ ಕುತೂಹಲವಿದ್ದರೆ, ದ್ವಿತೀಯಾರ್ಧದಲ್ಲಿ ಎಮೋಷನ್ ಹಾಗೂ ಕಾಡಿನೊಳಗೆ ಸಿಲುಕಿ ಅನುಭವಿಸುವ ಯಾತನೆಗೆ ಕಥೆ ಸೀಮಿತವಾಗಿದ್ದು, ಚಿತ್ರಕಥೆ ಸ್ವಲ್ಪ ಗಟ್ಟಿಯಾಗಿದ್ದರೂ, ಪ್ರೇಕ್ಷಕರಿಗೆ ಮತ್ತಷ್ಟು ಆಪ್ತವಾಗುತ್ತಿತ್ತು. ಇಡೀ ಕಥೆಯನ್ನು ಮಾಹಿರ್ ಮೊಹಿಯುದ್ದೀನ್ ಆವರಿಸಿದ್ದಾರೆ. ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಅವರ ಗಟ್ಟಿ ಧ್ವನಿ ಇಷ್ಟವಾಗುತ್ತದೆ. ಹರಿಣಿ ಸುಂದರ್ ರಾಜನ್, ಚೈತ್ರಾ ಜೆ.ಆಚಾರ್, ಮಾ. ಅನುರಾಗ್ ಪಾತ್ರಗಳು ಒಂದೆರೆಡು ದೃಶ್ಯಗಳಿಗೆ ಮಾತ್ರ ಸೀಮಿತ. ಗೌತಮ್ ಕೃಷ್ಣನ್ ಛಾಯಾಗ್ರಹಣ ಹಾಗೂ ಆ್ಯಂಟೋನಿ, ಹರಿ ಕ್ರಿಶಾಂತ್ ಹಿನ್ನೆಲೆ ಸಂಗೀತ ಕಾಡಿನ ಭಯಾನಕತೆಯನ್ನು ಹೆಚ್ಚಿಸಿ, ಎಚ್ಚರಿಸುತ್ತದೆ.

ರೇಟಿಂಗ್: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net