‘ವೃಷಭ’ ಟೈಟಲ್ ಫೈಟ್ : ಕನ್ನಡ ಮತ್ತು ಮಲಯಾಳಂ ಮೂಲ ಚಿತ್ರಕ್ಕೆ ಒಂದೇ ಶೀರ್ಷಿಕೆ

vruahbaha 1
Published on

ಬೆಂಗಳೂರು: ಒಂದೇ ಟೈಟಲ್‌ಗಾಗಿ ಎರಡು ತಂಡಗಳು ಪಟ್ಟು ಹಿಡಿಯುವುದು ಹೊಸತೇನಲ್ಲ. ‘ಬಸವ’, ‘ಅಡ್ಡ’, ‘ಲೀಡರ್’ ಸೇರಿ ಹಲವು ಚಿತ್ರಗಳ ಶೀರ್ಷಿಕೆ ವಿವಾದದ ಬಗ್ಗೆ ಗೊತ್ತಿದೆ. ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ‘ವೃಷಭ’. ಹೌದು, ಕನ್ನಡಿಗ ನಂದ ಕಿಶೋರ್ ಆ್ಯಕ್ಷನ್-ಕಟ್ ಹೇಳುತ್ತಿರುವ, ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ನಾಯಕನಾಗಿರುವ ಹಾಗೂ ಬಾಲಿವುಡ್ ನಿರ್ಮಾಣ ಸಂಸ್ಥೆ ಹಣ ಹೂಡಿರುವ ‘ವೃಷಭ’ ಇದೇ ನ. 6ರಂದು ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ಅದರ ನಡುವೆಯೇ ಇತ್ತೀಚೆಗಷ್ಟೆ ಕನ್ನಡ ಚಿತ್ರತಂಡವೊಂದು ‘ವೃಷಭ’ ನಮ್ಮ ಟೈಟಲ್ ಎಂದು ಆರೋಪಿಸಿದೆ. ಹೌದು, ಯುವ ನಿರ್ದೇಶಕ ಉಮೇಶ್ ಹೆಬ್ಬಾಳ ನಿರ್ದೇಶನದ ‘ವೃಷಭ’ 3 ವರ್ಷಗಳ ಹಿಂದೆಯೇ ಆರಂಭವಾಗಿ ಶೂಟಿಂಗ್ ಪೂರ್ಣಗೊಳಿಸಿ, ಬಿಡುಗಡೆಗೆ ಸಿದ್ಧವಾಗಿದೆ. ಇದೀಗ ಈ ಎರಡು ಚಿತ್ರಗಳ ಟೈಟಲ್ ಕ್ಲ್ಯಾಶ್ ಆಗುತ್ತಿದ್ದು, ‘ನ್ಯಾಯಕ್ಕಾಗಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮೊರೆ ಹೋಗಲಿದ್ದೇವೆ’ ಎಂದು ಉಮೇಶ್ ತಿಳಿಸಿದ್ದಾರೆ. ‘‘ವೃಷಭ’ ನನ್ನ ಬಹುದಿನಗಳ ಕನಸು. ವರ್ಷದ ಹಿಂದೆ ಏಕ್ತಾ ಕಪೂರ್ ಸಂಸ್ಥೆಯು ನಮಗೆ ಪತ್ರ ಬರೆದು ಶೀರ್ಷಿಕೆ ಕೊಡುವಿರಾ ಎಂದು ಕೇಳಿದ್ದರು. ಬಳಿಕ ನಮ್ಮ ಸಂಪರ್ಕಕ್ಕೆ ಬರಲಿಲ್ಲ. ಈಗ ನೋಡಿದರೆ, ಅದೇ ಟೈಟಲ್‌ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಈ ಬಗ್ಗೆ ವಿಚಾರಿಸಲು ನಿರ್ದೇಶಕ ನಂದ ಕಿಶೋರ್‌ಗೆ ಕರೆ ಮಾಡಿ ಕೇಳಿದಾಗ ಕನ್ನಡದಲ್ಲಿ ರಿಲೀಸ್ ಮಾಡುತ್ತಿಲ್ಲ ಎಂದಿದ್ದರು. ಈಗ ನಾವು ರಿಲೀಸ್‌ಗೆ ರೆಡಿಯಾಗುತ್ತಿದ್ದು ನಮ್ಮ ಚಿತ್ರಕ್ಕೆ ಸಮಸ್ಯೆಯಾಗುತ್ತಿದೆ. ಫಿಲಂ ಚೇಂಬರ್‌ನಲ್ಲಿ ಟೈಟಲ್ ನೋಂದಾಯಿಸಿ, ನವೀಕರಣ ಕೂಡ ಮಾಡಿದ್ದೇವೆ. ಇದೀಗ ಅವರು ಕನ್ನಡ ಟೈಟಲ್ ರಿಜಿಸ್ಟರ್ ಮಾಡಲು ಹೊರಟಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net