

ಮುಂಬೈ: "ದಿ ಕಾಶ್ಮೀರ್ ಫೈಲ್ಸ್' ನಂತರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮುಂದೇನು ಮಾಡಬಹುದು ಎಂಬ ಪ್ರಶ್ನೆ ಮತ್ತು ಕುತೂಹಲ ಎಲ್ಲರಲ್ಲೂ ಇತ್ತು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ನಿಗೂಢ ಸಾವಿನ ಸುತ್ತ ಅವರು ಮಾಡಿದ ಚಿತ್ರ "ತಾಶ್ಕೆಂಟ್ ಫೈಲ್ಸ್' ಸಾಕಷ್ಟು ಸುದ್ದಿ ಮಾಡಿತು. ನಂತರ "ದಿ ಕಾಶ್ಮೀರ್ ಫೈಲ್ಸ್' ಸೂಪರ್ ಹಿಟ್ ಆಗುವುದರ ಜತೆಗೆ ಜಗತ್ತಿನಾದ್ಯಂತ 250 ಕೋಟಿ ರೂ. ಸಂಪಾದಿಸಿತು. ಈ ಹಿನ್ನೆಲೆಯಲ್ಲಿ ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಎಲ್ಲರಿಗೂ ಸಹಜವಾಗಿಯೇ ಇತ್ತು.
ಇದನ್ನೂ ಓದಿ: ಜೇಮ್ಸ್ ಚಿತ್ರಕ್ಕೆ ಪುನೀತ್ ವಾಯ್ಸ್ ರಿಕ್ರಿಯೇಷನ್ !
ಆ ಕುತೂಹಲಕ್ಕೆ ಈಗ ಕೊನೆಗೂ ತೆರೆ ಬಿದ್ದಿದೆ. "ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕೆ ಜನ ತೋರಿದ ಪ್ರೀತಿ ಮತ್ತು ನೀಡಿರುವ ಪ್ರೋತ್ಸಾಹಕ್ಕೆ ಧನ್ಯವಾದ ತಳಿಸಿರುವ ಅವರು, ಮುಂದಿನ ಚಿತ್ರದ ಕೆಲಸ ಶುರು ಮಾಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮುಂದಿನ ಚಿತ್ರ "ದಿ ಡೆಲ್ಲಿ ಫೈಲ್ಸ್' ಆಗಲಿದೆ ಎಂಬ ಸೂಚನೆಯನ್ನೂ ನೀಡಿದ್ದಾರೆ.
"ದಿ ಡೆಲ್ಲಿ ಫೈಲ್ಸ್' ಚಿತ್ರದ ಕಥೆಯೇನು? ಈ ಬಾರಿ ವಿವೇಕ್ ಏನು ಹೇಳಲು ಹೊರಟಿದ್ದಾರೆ? ಎಂಬ ಪ್ರಶ್ನೆ ಸಹಜವೇ. ಆದರೆ, ಈ ರಹಸ್ಯವನ್ನು ವಿವೇಕ್ ಬಿಟ್ಟುಕೊಟ್ಟಿಲ್ಲ. 1984ರಲ್ಲಿ ದೆಹಲಿಯಲ್ಲಿ ನಡೆದ ಸಿಖ್ ಧಂಗೆಯ ಕುರಿತಾಗಿ ಚಿತ್ರ ಮೂಡಿಬರಲಿದೆ ಎಂಬ ಮಾತು ಗಟ್ಟಿಯಾಗಿ ಕೇಳಿ ಬರುತ್ತಿದೆ. ನಿಜಕ್ಕೂ ಚಿತ್ರದಲ್ಲಿ ಏನಿರುತ್ತದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.