‘ರಾಯಲ್’ ವಿರಾಟ್: ಜ. 24ಕ್ಕೆ ಬಿಡುಗಡೆಯಾಗಲಿದೆ ನಟನ ಎರಡನೇ ಸಿನಿಮಾ

viraat 2
Published on

ಬೆಂಗಳೂರು: ಕನ್ನಡದ ‘ಕಿಸ್’ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದ ನಟ ವಿರಾಟ್ ಬಹು ವರ್ಷಗಳ ಬಳಿಕ ‘ರಾಯಲ್’ ಮೂಲಕ ಮತ್ತೊಮ್ಮೆ ತೆರೆ ಮೇಲೆ ಬರುತ್ತಿದ್ದಾರೆ. ದಿನಕರ್ ತೂಗುದೀಪ್ ನಿರ್ದೇಶನ ಇರುವ ಈ ಚಿತ್ರದ ಮೂರು ಸಾಂಗ್‌ಗಳು ಬಿಡುಗಡೆಯಾಗಿ, ಸದ್ದು ಮಾಡುತ್ತಿವೆ. ಮುಂದಿನ ವರ್ಷ ಜ.24ರಂದು ಚಿತ್ರ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಯಕ ನಟ ವಿರಾಟ್ ಚಿತ್ರ ಹಾಗೂ ಪಾತ್ರದ ಬಗ್ಗೆ ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡರು. ‘‘ರಾಯಲ್’ ಇಡೀ ಕುಟುಂಬ ಕುಳಿತು ನೋಡುವಂತ ಸಿನಿಮಾವಾಗಿದ್ದು, ಪ್ರೇಕ್ಷಕರು ಮನೆಗೆ ಹೋಗುವಾಗ ಇಡೀ ಚಿತ್ರವನ್ನು ತೆಗೆದುಕೊಂಡು ಹೋಗುತ್ತಾರೆ. ದಿನಕರ್ ಸರ್ ಅಂತಹ ಅಪ್ತವಾದ ಕಥೆ ಹೇಳಿದ್ದಾರೆ. ಎಮೋಷನ್, ಡಾನ್ಸ್, ಹಾಸ್ಯ, ಲವ್, ಆ್ಯಕ್ಷನ್ ಎಲ್ಲವೂ ಈ ಚಿತ್ರದಲ್ಲಿದೆ. ಹೀಗಾಗಿ ಇದು ಎಲ್ಲ ವರ್ಗದವರನ್ನು ಸೆಳೆಯುತ್ತದೆ’ ಎನ್ನುತ್ತಾರೆ.

ಎನರ್ಜಿಟಿಕ್ ಪಾತ್ರ: ನಟ ವಿರಾಟ್ ಬಹು ವರ್ಷಗಳ ಬಳಿಕ ಮತ್ತೆ ಅಂಕಣಕ್ಕೆ ಬಂದಿದ್ದಾರೆ. ಪಾತ್ರ, ಸಿನಿಮಾ ಆಯ್ಕೆಯಲ್ಲೂ ಚ್ಯೂಸಿ ಎನಿಸುವ ಇವರು ಒಂದು ಸಿನಿಮಾ ಪೂರ್ಣಗೊಂಡ ಬಳಿಕವೇ ಮತ್ತೊಂದು ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ‘ರಾಯಲ್’ ಪ್ರಯಾಣದ ಕುರಿತು, ‘ದಿನಕರ್ ಅವರಂತ ನಿರ್ದೇಶಕರೊಂದಿಗೆ ಕೆಲಸ ಮಾಡುವುದೇ ದೊಡ್ಡ ಪುಣ್ಯ. ಮಗುವಿನಂತೆ ಅವರಿಂದ ಸಾಕಷ್ಟು ಕಲಿತಿದ್ದೇನೆ. ಇಲ್ಲಿ ನನ್ನದು ಪಕ್ಕಾ ಎನರ್ಜಿಟಿಕ್ ಹಾಗೂ ಎಂಟರ್‌ನ್ಮೆಂಟ್ ಪಾತ್ರ. ಜಿಮ್‌ನಲ್ಲಿ ಬೆವರು ಹರಿಸಿ ಸ್ಟ್ರಾಂಗ್ ಆಗಿ ಕಾಣಿಸಿಕೊಂಡಿದ್ದೇನೆ. ಡಾನ್ಸ್ ಹಾಗೂ ಸಾಹಸ ದೃಶ್ಯಗಳಿಗೆ ಹಲವು ರೀತಿಯಲ್ಲಿ ವರ್ಕ್‌ಶಾಪ್ ಮಾಡಿದ್ದೇವೆ. ಹೀಗಾಗಿ ನನ್ನ ಪಾತ್ರ ಚೆನ್ನಾಗಿ ಬರಲು ಕಾರಣವಾಯಿತು. ಇನ್ನು ಚಿತ್ರದಲ್ಲಿ ಬಹುತಾರಾಗಣವಿದ್ದು, ಸಂಜನಾ ಆನಂದ್ ನನಗೆ ನಾಯಕಿಯಾಗಿ ಸಾಥ್ ನೀಡಿದ್ದಾರೆ. ಇನ್ನು, ರಘು ಮುಖರ್ಜಿ, ರಂಗಾಯಣ ರಘು, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಛಾಯಾ ಸಿಂಗ್ ಅವರಂಥ ಕಲಾವಿದರಿಂದ ತೆರೆ ಹಿಂದೆ ಹಾಗೂ ಮುಂದೆ ಸಾಕಷ್ಟು ಕಲಿತಿದ್ದೇನೆ’ ಎನ್ನುತ್ತಾರೆ.

ದುನಿಯಾ ಸೂರಿ ಜತೆ ಮುಂದಿನ ಸಿನಿಮಾ: ‘ರಾಯಲ್’ ಬಳಿಕ ವಿರಾಟ್, ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ. ಪ್ರಿ-ಪ್ರೊಡಕ್ಷನ್ ಕಾರ್ಯಗಳು ಆರಂಭಗೊಂಡಿದ್ದು, ಈ ಚಿತ್ರದಲ್ಲಿ ವಿರಾಟ್‌ಗೆ ದುನಿಯಾ ವಿಜಯ್ ಪುತ್ರಿ ರಿತನ್ಯಾ ನಾಯಕಿಯಾಗಲಿದ್ದಾರೆ. ಈ ಬಗ್ಗೆ ವಿರಾಟ್, ‘ನನ್ನ ಮುಂದಿನ ಸಿನಿಮಾ ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬರಲಿದ್ದು, ಸದ್ಯದಲ್ಲೇ ೋಷಣೆಯಾಗಲಿದೆ. ಚಿತ್ರದ ಬರವಣಿಗೆ ಪೂರ್ಣವಾಗಿದೆ. ಪ್ರಿ-ಪ್ರೊಡಕ್ಷನ್ ಕಾರ್ಯಗಳು ಪೂರ್ಣಗೊಂಡ ಬಳಿಕ ಶೂಟಿಂಗ್ ನಡೆಸಲಿದ್ದೇವೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net